

ಚಿಕ್ಕಮಗಳೂರು: ಕರೊನಾ ಸೋಂಕಿಗೆ ಮೂವರು ಬಲಿಯಾಗಿ, ಸೋಂಕಿತ ಪ್ರಕರಣಗಳು ಉಲ್ಬಣಿಸುವ ಮುನ್ಸೂಚನೆ ಕಂಡು ಬಂದಿದ್ದರಿಂದ ಕಡೂರು ತಾಲೂಕಿನ ಪಿಳ್ಳೇನಹಳ್ಳಿ ಗ್ರಾಮಸ್ಥರು 20 ದಿನ ಲಾಕ್ಡೌನ್ ಘೊಷಣೆ ಮಾಡಿದ್ದಾರೆ. ಗ್ರಾಮಕ್ಕೆ ಯಾರಿಗೂ ಪ್ರವೇಶವಿಲ್ಲ, ಗ್ರಾಮಸ್ಥರೂ ಹೊರಗೆ ಹೋಗುವಂತಿಲ್ಲ.
ಗ್ರಾಮಸ್ಥರು ಇಂತಹ ನಿರ್ಧಾರ ಕೈಗೊಳ್ಳಲು ಕಾರಣರಾದವರು ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ.
ಪಿಳ್ಳೇನಹಳ್ಳಿ ಗ್ರಾಮದ ಮುಖಂಡರನ್ನು ದೂರವಾಣಿಯಲ್ಲಿ ಸಂರ್ಪಸಿದ ಸಿರಿಗೆರೆ ಬೃಹನ್ಮಠದ ತರಳಬಾಳು ಜಗದ್ಗುರು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಉಲ್ಬಣಿಸುತ್ತಿರುವ ಸೋಂಕು ತಡೆಗೆ ಗ್ರಾಮವನ್ನು 20 ದಿನ ಲಾಕ್ಡೌನ್ ಮಾಡಿದರೆ ಒಳಿತು ಎಂದು ಸಲಹೆ ನೀಡಿದ್ದಾರೆ.
ಸ್ವಾಮೀಜಿ ಸಲಹೆಗೆ ಸ್ಪಂದಿಸಿದ ಮುಖಂಡರಾದ ಟಿ.ಕೆ.ರುದ್ರಪ್ಪ, ಲೋಕೇಶ್, ಕಲ್ಮರುಡಪ್ಪ, ರಮೇಶ್, ರತ್ನಾಕರ್, ಓಂಕಾರಪ್ಪ, ರವಿ ಸೇರಿದಂತೆ ಹಲವರು ಸಭೆ ಸೇರಿ ರ್ಚಚಿಸಿದರು. ಗ್ರಾಮದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ನಿತ್ಯ ಕಾರ್ಯದ ಬರದಲ್ಲಿ ಬೇರೆಡೆ ತೆರಳಿದಾಗ ಅನ್ಯ ಗ್ರಾಮಕ್ಕೂ ಹರಡುತ್ತದೆ. ಇದೇ ರೀತಿ ಮುಂದುವರೆದರೆ ಸುತ್ತಮುತ್ತ ದೊಡ್ಡ ಮಟ್ಟದಲ್ಲಿ ಸೋಂಕು ಹರಡಿ ಸಾವುನೋವು ಹೆಚ್ಚಾಗಬಹುದು. ನಮ್ಮ ಊರಿನ ರಕ್ಷಣೆ ಅಷ್ಟೇ ಅಲ್ಲ, ಬೇರೆ ಊರಿನ ಜನರಿಗೂ ತೊಂದರೆ ಆಗದಂತೆ ಎಚ್ಚರಿಗೆ ವಹಿಸಬೇಕಾಗಿದೆ. ಆದ್ದರಿಂದ ಗ್ರಾಮವನ್ನು 20 ಲಾಕ್ಡೌನ್ ಮಾಡೋಣ ಎಂದು ನಿರ್ಣಯ ಮಾಡಿದರು.
ಸೋಂಕು ತಡೆಗಟ್ಟಲು ಶಪಥ: ಪಿಳ್ಳೇನಹಳ್ಳಿ ಗ್ರಾಮದ ಕೆಲವರಿಗೆ ಜುಲೈನಲ್ಲಿ ಕರೊನಾ ಸೋಂಕು ದೃಢಪಟ್ಟು ಅವರಲ್ಲಿ 65 ವರ್ಷದ ವೃದ್ಧ ಮೃತಪಟ್ಟಿದ್ದರು. ನಂತರ ಸೋಂಕು ಪ್ರಕರಣಗಳು ದಿನೇದಿನೆ ಹೆಚ್ಚಾಗತೊಡಗಿತು. ಹೀಗಾಗಿ ಪಕ್ಷ, ಜಾತಿಬೇಧ ಮರೆತು ರಾಜಕೀಯ ರಹಿತವಾಗಿ ಪಂಚಾಯಿತಿ ಸದಸ್ಯರು, ಮಾಜಿ ಸದಸ್ಯರು, ಗ್ರಾಮದ ಮುಖಂಡರು ಸೋಂಕು ತಡೆಗೆ ಶಪಥ ಮಾಡಿದ್ದಾರೆ.
ಕೃಷಿ ಕೆಲಸ ಓಕೆ, ಮಾಸ್ಕ್ ಬೇಕು: ಲಾಕ್ಡೌನ್ ಅವಧಿಯಲ್ಲಿ ಕೃಷಿ ಕೆಲಸಕ್ಕೆ ಅನುಮತಿ ನೀಡಲಾಗಿದೆ. ಆದರೆ ರೈತರು, ಕೃಷಿ ಕಾರ್ವಿುಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ ಜಮೀನುಗಳಿಗೆ ಹೋಗಬೇಕು. ಹೊಲಗಳಲ್ಲೂ ಗುಂಪು ಸೇರಬಾರದು. ಪರಸ್ಪರ ಅಂತರ ಕಾಯ್ದುಕೊಂಡು ಕೆಲಸ ಮಾಡಬೇಕು. ನಿಯಮ ಉಲ್ಲಂಘನೆ ಮಾಡದಂತೆ ಕೃಷಿ ಕೆಲಸ ಮುಗಿಸಿ ಮನೆಗೆ ತೆರಳಬೇಕು ಎಂದು ತೀರ್ಮಾನ ಮಾಡಲಾಗಿದೆ.
ಬೆಳಗ್ಗೆ 10 ರಿಂದ ಸಂಜೆ 6ರ ವರೆಗೆ ಮಾತ್ರ: ಹಾಲು, ಮೊಸರು, ಹಣ್ಣು, ತರಕಾರಿ, ಆಹಾರ ಧಾನ್ಯ ಸೇರಿ ನಿತ್ಯ ಬಳಕೆ ವಸ್ತುಗಳ ಖರೀದಿಗೆ ಬೆಳಗ್ಗೆ 7 ರಿಂದ 10 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದ್ದು, 10 ರಿಂದ ಸಂಜೆ 6 ಗಂಟೆವರೆಗೆ ಪೂರ್ಣ ಲಾಕ್ಡೌನ್ ಜಾರಿಯಲ್ಲಿರುತ್ತದೆ. ಗ್ರಾಮಸ್ಥರು ಅನವಶ್ಯಕವಾಗಿ ಮನೆಯಿಂದ ಹೊರಗೆ ಬರುವಂತಿಲ್ಲ. ತುರ್ತು ಸಂದರ್ಭದಲ್ಲಿ ಮಾತ್ರ ಹೊರ ಬರಲು ಅನುಮತಿ ನೀಡಲಾಗಿದೆ.
ನೆಂಟರು ಬರುವಂತಿಲ್ಲ!: ಗ್ರಾಮದಲ್ಲಿ ಒಂದು ಮನೆಯಿಂದ ಮತ್ತೊಂದು ಮನೆ ಸಂಪರ್ಕಕ್ಕೂ ಕಡಿವಾಣ ಹಾಕಿಕೊಂಡಿರುವ ಗ್ರಾಮಸ್ಥರು, ಅಂಗಡಿಗಳನ್ನು ಬಂದ್ ಮಾಡಲು ಸಹಮತ ವ್ಯಕ್ತಪಡಿಸಿದ್ದಾರೆ. ಸೋಂಕು ನಿಯಂತ್ರಣಕ್ಕೆ ಬರುವವರೆಗೆ ನೆಂಟರಿಷ್ಟರನ್ನು ಆಹ್ವಾನಿಸುವಂತಿಲ್ಲ, ಗ್ರಾಮಸ್ಥರೂ ನೆಂಟರ ಊರುಗಳಿಗೆ ಹೋಗುವಂತಿಲ್ಲ. ಗ್ರಾಮದಲ್ಲಿ ಸಭೆ, ಸಮಾರಂಭಕ್ಕೂ ಬ್ರೇಕ್ ಹಾಕಲಾಗಿದ್ದು, ಒಂದು ವೇಳೆ ಸಮಾರಂಭ ಮಾಡಿದರೂ ಯಾರೂ ಹೋಗಬಾರದು ಎಂಬ ನಿರ್ಧಾರ ಮಾಡಲಾಗಿದೆ.
ಜಿಲ್ಲೆಯಲ್ಲಿ ಪ್ರಥಮ ಗ್ರಾಮ: ಮೈಕ್ರೋಲಾಕ್ ಡೌನ್ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದರು. 800 ಮನೆ ಹತ್ತಾರು ಅಂಗಡಿಗಳಿರುವ ಪಿಳ್ಳೇನಹಳ್ಳಿಯಲ್ಲಿ ಗ್ರಾಮದ ಮುಖಂಡರು ರ್ಚಚಿಸಿ ಗ್ರಾಮಸ್ಥರ ಸಹಮತದ ಮೇರೆಗೆ ಸ್ವಯಂ ಘೊಷಿತ ಲಾಕ್ಡೌನ್ಗೆ ನಿರ್ಧಾರ ಮಾಡಿದ್ದಾರೆ. ರಾಜ್ಯದಲ್ಲಿ ಇಂಥ ನಿರ್ಧಾರ ಕೈಗೊಂಡ ಎರಡನೆಯ ಹಾಗೂ ಜಿಲ್ಲೆಯ ಪ್ರಥಮ ಗ್ರಾಮ ಇದು.
ಎರಡು ಬಾರಿ ಕ್ಯಾಂಪ್: ಪಿಳ್ಳೇನಹಳ್ಳಿಯಲ್ಲಿ ಓರ್ವ ವೃದ್ಧ ಮೃತಪಟ್ಟ ವಿಷಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಗಮನಕ್ಕೆ ಬಂದ ನಂತರ ಗ್ರಾಮದಲ್ಲಿ ಸೆಪ್ಟೆಂಬರ್ ಅಂತ್ಯದಲ್ಲಿ ಎರಡು ಬಾರಿ ಕರೊನಾ ಕ್ಯಾಂಪ್ ನಡೆಸಲಾಗಿದ್ದು 76 ಜನ ಸ್ವಯಂಪ್ರೇರಿತರಾಗಿ ಬಂದು ತಪಾಸಣೆ ಮಾಡಿಕೊಂಡರು. ಅವರಲ್ಲಿ 12 ಮಂದಿಗೆ ಸೋಂಕು ದೃಢಪಟ್ಟಿದ್ದು, ಹೋಮ್ ಕ್ವಾರಂಟೈನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕ್ಯಾಂಪ್ಗೂ ಮುನ್ನ 28 ಜನರಲ್ಲಿ ಸೋಂಕು ದೃಢಪಟ್ಟಿತ್ತು.
ಶ್ರೀಗಳಿಂದ ಫಾಲೋ ಅಪ್: ಸೋಂಕು ನಿಯಂತ್ರಿಲು ಲಾಕ್ಡೌನ್ ಜಾರಿಗೆ ಸಲಹೆ ಮಾಡಿದ್ದ ತರಳಬಾಳು ಶ್ರೀಗಳು ನಂತರ ಎರಡು ಬಾರಿ ಕರೆ ಮಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಗ್ರಾಮದ ಮುಖಂಡ ಟಿ.ಕೆ. ರುದ್ರಪ್ಪ ತಿಳಿಸಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಗ್ರಾಮದಲ್ಲಿ ವಿವಿಧ ಕಾರಣಗಳಿಗೆ 16 ಜನ, ಕರೊನಾದಿಂದ ಮೂವರು ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡಿಸಿದಾಗ 9 ಜನರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಈ ವಿಷಯ ತಿಳಿದ ಸಿರಿಗೆರೆ ತರಳಬಾಳು ಜಗದ್ಗುರುಗಳು ನಮಗೆ ಕರೆ ಮಾಡಿ ಗ್ರಾಮದಲ್ಲಿ 20 ದಿನ ಲಾಕ್ಡೌನ್ ಮಾಡಿ ಎಂದು ಸಲಹೆ ನೀಡಿದ್ದರು. ಗ್ರಾಮದಲ್ಲಿ ಈಗ ಲಾಕ್ಡೌನ್ ಜಾರಿಯಲ್ಲಿದ್ದು, ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದೇವೆ ಎಂದು ಹೇಳಿದರು.