

ಸಿರಿಗೆರೆ: ಕರೊನಾ ಸೋಂಕಿತರ ಸೇವೆಗೆ ಸಿರಿಗೆರೆಯಲ್ಲಿ ಸ್ಥಾಪಿಸಲಾದ 60 ಹಾಸಿಗೆಗಳ ತರಳಬಾಳು ಆರೈಕೆ ಕೇಂದ್ರ ಬುಧವಾರ ಕಾರ್ಯಾರಂಭ ಮಾಡಿತು. ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ.ಪಾಟೀಲ್ ಕೇಂದ್ರಕ್ಕೆ ಚಾಲನೆ ನೀಡಿದರು.
ಲಿಂ.ಶಿವಕಮಾರ ಶ್ರೀ ವಿದ್ಯಾರ್ಥಿನಿಲಯದಲ್ಲಿ ಪ್ರಾರಂಭಿಸಲಾದ ಈ ಕೇಂದ್ರದಲ್ಲಿ ಸೋಂಕಿತರಿಗೆ ಉಚಿತವಾಗಿ ಔಷಧಪಚಾರದ ಜತೆಗೆ ಊಟ, ವಸತಿ ವ್ಯವಸ್ಥೆಯೂ ಇರಲಿದೆ. ಸಿರಿಗೆರೆ ಸುತ್ತಮುತ್ತಲಿನ ಗ್ರಾಮಗಳ ಸೋಂಕಿತರು ದಾವಣಗೆರೆ, ಚಿತ್ರದುರ್ಗದ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಲು ಆಂಬುಲೆನ್ಸ್ ಸೇವೆ ಪ್ರಾರಂಭಿಸಿದ್ದ ಶ್ರೀಗಳು ಇದೀಗ ಆರೈಕೆ ಕೇಂದ್ರ ತೆರೆದು ಸೇವಾ ವ್ಯಾಪ್ತಿ ವಿಸ್ತರಿಸಿದ್ದಾರೆ.
ಆರೈಕೆ ಕೇಂದಕ್ಕೆ ಚಾಲನೆ ನೀಡಿ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು, ಸಿರಿಗೆರೆ ತರಳಬಾಳು ಮಠದ ಸೇವಾತತ್ಪರತೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಕೋವಿಡ್ ಕೇರ್ ಕೇಂದ್ರ ಆರಂಭಿಸಿ ಮಾನವೀಯತೆ ಮೆರೆದಿರುವ ಸ್ವಾಮೀಜಿ, ಗ್ರಾಮೀಣ ಭಾಗದ ಸೋಂಕಿತರಿಗೆ ಕರೆ ಮಾಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ ಎಂದು ಪ್ರಶಂಸಿಸಿದರು. ಸೋಂಕಿತರು ಮನೆಯಲ್ಲಿರುವ ಬದಲು ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಸಚಿವಧ್ವಯುರು ಸಲಹೆ ನೀಡಿದರು.
ಕೇಂದ್ರದ ಮಾಜಿ ಸಚಿವ, ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ಹರಿಹರ, ದಾವಣಗೆರೆ, ಸಿರಿಗೆರೆ, ಬೆಂಗಳೂರಲ್ಲಿ ನಿತ್ಯ 800 ಸೋಂಕಿತರು ಹಾಗೂ ಕರೊನಾ ಸೇನಾನಿಗಳಿಗೆ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಮಾರ್ಗದರ್ಶನದಲ್ಲಿ ತರಳಬಾಳು ಸೇವಾ ಸಮಿತಿ ಊಟೋಪಚಾರ ವ್ಯವಸ್ಥೆ ಮಾಡಿದೆ ಎಂದರು.
ಮೂರನೇ ಮಹಾಯುದ್ಧಕ್ಕೆ ಹೋಲಿಸಿದ ಶ್ರೀಗಳು
ಕರೊನಾ ಒಂದು ರೀತಿ ಮೂರನೇ ಮಹಾಯುದ್ಧದಂತೆ ಬಂದು ಅಪ್ಪಳಿಸಿದೆ. ಇಡೀ ವಿಶ್ವ ಇದರಿಂದ ತತ್ತರಿಸಿದೆ ಎಂದು ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿಷಾದಿಸಿದರು. ವಿಶ್ವದ ಎಲ್ಲ ರಾಷ್ಟ್ರಗಳಿಗೆ ಕರೊನಾ ಒಂದೇ ವೈರಿಯಾಗಿದೆ. ಲಸಿಕೆ ಹಾಕಿಸಿಕೊಳ್ಳುವ ಜತೆಗೆ ನಿಯಾಮಾವಳಿ ಪಾಲಿಸುವ ಮೂಲಕ ರೋಗದ ವಿರುದ್ಧ ಹೋರಾಡಬೇಕಿದೆ ಎಂದು ಶ್ರೀಗಳು ತಿಳಿಸಿದರು. ಅನೀರೀಕ್ಷಿತವಾಗಿ ಮಠಕ್ಕೆ ಆಗಮಿಸಿದ ಸಚಿವಧ್ವಯರು ತರಳಬಾಳು ಕೋವಿಡ್ ಕೇಂದ್ರ ಉದ್ಘಾಟಿಸುವ ಮೂಲಕ ಸೋಂಕಿತರಲ್ಲಿ ಧೈರ್ಯ,ಆತ್ಮವಿಶ್ವಾಸ ತುಂಬಿದ್ದಾರೆ ಎಂದರು.
ಲಾಕ್‌ಡೌನ್ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಯಿ ಅವರು ಎಲ್ಲರನ್ನೂ ಒಂದು ರೀತಿ ಬಂಧನ ದಲ್ಲಿಟ್ಟಿದ್ದಾರೆ. ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತ್ರ ಕೃಷಿ ಚಟುವಟಿಕೆಗೆ ಧಾರಾಳ ಅವಕಾಶ ನೀಡಿದ್ದಾರೆ ಎಂದು ತಿಳಿಸಿದರು. ಶಿವ ಸೈನ್ಯದ ಶಿಷ್ಯರು ತರಳಬಾಳು ಸೇವಾ ಸಮಿತಿ ಮೂಲಕ ನೀಡುತ್ತಿದ್ದ ಊಟದ ವ್ಯವಸ್ಥೆಯನ್ನು ಇನ್ನಷ್ಟು ಕಾಲ ವಿಸ್ತರಿಸುವಂತೆ ಇದೇ ವೇಳೆ ಶ್ರೀಗಳು ಸೂಚಿಸಿದರು.
ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಲಿಂ.ಶ್ರೀ ಶಿವಕುಮಾರ ಶ್ರೀಗಳ ವಿದ್ಯಾರ್ಥಿನಿಲಯದಲ್ಲಿ 60 ಹಾಸಿಗೆಗೆಳ ಕೋವಿಡ್ ಆರೈಕೆ ಕೇಂದ್ರ ತೆರೆಯುವ ಮೂಲಕ ಸೋಂಕಿತರ ನೆರವಿಗೆ ಧಾವಿಸಿದ್ದಾರೆ. ತರಳಬಾಳು ಸೇವಾ ಸಮಿತಿ ಮೂಲಕ ಊಟೋಪಚಾರಕ್ಕೂ ವ್ಯವಸ್ಥೆ ಮಾಡಿದ್ದಾರೆ.
ಎಂ.ಚಂದ್ರಪ್ಪ , ಶಾಸಕರು
ಈಆರ್‌ಎಂ ಗ್ರೂಪ್ಸ್ ಕೊಡುಗೆ
ಕೋವಿಡ್ ಕೇರ್ ಆರೈಕೆ ಕೇಂದ್ರಕ್ಕೆ ಈಆರ್‌ಎಂ ಗ್ರೂಪ್ಸ್ ಮಾಲೀಕ ಪ್ರವಿಣ್ ಅವರು ರೆಫ್ರಿಜಿರೇಟರ್, ಜನರೇಟರ್, 20ಹಾಸಿಗೆ, ಇಸಿಜಿ ಉಪಕರಣ, ಆಕ್ಸಿಜನ್ ಕಾನ್ಸಂಟ್ರೇಟರ್, ಪಲ್ಸ್ ಆಕ್ಸಿಮೀಟರ್, ಗೀಸರ್, ಡ್ರಿಂಕಿಂಗ್ ವಾಟರ್ ಹೀಟರ್, 100 ಬೆಡ್‌ಶೀಟ್, 2000 ಸರ್ಜಿಕಲ್ ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಕೊಡುಗೆ ನೀಡಿದರು.
ವಿವಿಧ ಕಾರ್ಯಗಳಿಗೆ ಚಾಲನೆ: ಇದೇ ವೇಳೆ ಸಿರಿಗೆರೆ ಸಮುದಾಯ ಆಸ್ಪತ್ರೆಯ ತಡೆಗೋಡೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು ಹಾಗೂ ಆಂಬುಲೆನ್ಸ್‌ಗೆ ಚಾಲನೆ ನೀಡಲಾಯಿತು.
ಸಂಸದ ಎ.ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ನಂದಿನಿದೇವಿ, ತಹಸೀಲ್ದಾರ್ ವೆಂಕಟೇಶಯ್ಯ, ಕಂದಾಯ, ಆರೋಗ್ಯ ಇಲಾಖಾಧಿಕಾರಿಗಳು, ಗ್ರಾಮಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಆಶಾ ಕಾರ್ಯಕರ್ತೆಯರು ಇದ್ದರು. ಸೋಂಕಿತರಿಗೆ ಹೊಳಿಗೆ ಊಟ ಸಿದ್ಧಪಡಿಸಲಾಗಿತ್ತು.