

ಹುಣಸೂರು: ತಾಲೂಕಿನ ಗಾವಡಗೆರೆ ರೈತ ಸೇವಾ ಸಹಕಾರ ಸಂಘಕ್ಕೆ ನಡೆದ ನಿರ್ದೇಶಕರ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದೆ.
ಸಾಮಾನ್ಯಕ್ಷೇತ್ರ(ಮಹಿಳಾ)ದಿಂದ ಸತತ 6ನೇ ಬಾರಿಗೆ ಸದಸ್ಯೆಯೊಬ್ಬರು ಆಯ್ಕೆಯಾಗಿದ್ದರೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರೊಬ್ಬರು ಪರಾಜಿತರಾಗಿದ್ದಾರೆ.
ಕಳೆದ ಭಾನುವಾರ ಮತದಾನ ನಡೆದಿತ್ತು. ಸಾಲಗಾರರ ಕ್ಷೇತ್ರದಿಂದ 12 ನಿರ್ದೇಶಕರ ಆಯ್ಕೆಗೆ 24 ಸ್ಪರ್ಧಾಳುಗಳು ಸ್ಪರ್ಧಿಸಿದ್ದರು. ಸಾಲಗಾರರಲ್ಲದ ಒಂದು ನಿರ್ದೇಶಕರ ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದರು. ಸಾಲಗಾರರ ಕ್ಷೇತ್ರದ ಒಟ್ಟು 2745 ಮತದಾರರ ಪೈಕಿ 2629 ಮಂದಿ ಮತ ಚಲಾಯಿಸಿದ್ದರೆ, ಸಾಲಗಾರರ ಕ್ಷೇತ್ರದಲ್ಲಿ 264 ಮತದಾರರಿದ್ದು 253 ಮತದಾರರು ಮತ ಚಲಾಯಿಸಿದ್ದರು. ಚುನಾವಣಾಧಿಕಾರಿಯಾಗಿ ಹುಣಸೂರು ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ರಾಜಣ್ಣ ಕರ್ತವ್ಯ ನಿರ್ವಹಿಸಿದರು.
ಮಹಿಳೆಯರಿಗೆ ಮೀಸಲಾಗಿದ್ದ ಸಾಮಾನ್ಯ ಕ್ಷೇತ್ರದಿಂದ ಬಿ.ಎಂ.ತಾರಕೇಶ್ವರಿ ಸತತ 6ನೇ ಬಾರಿಗೆ ಆಯ್ಕೆಯಾಗುವ ಮೂಲಕ ಸಾಧನೆಗೈದಿದ್ದರೆ(1995 ರಿಂದ 2025 ರವರೆಗೆ), ಜಿಪಂ ಮಾಜಿ ಸದಸ್ಯ ದೇವರಾಜ ಪರಾಜಿತರಾಗಿದ್ದಾರೆ.
ಸಾಲಗಾರರ ಕ್ಷೇತ್ರದಿಂದ ಹೊನ್ನಪ್ಪ ರಾವ್ ಕಾಳಿಂಗೆ (ಹಿಂದುಳಿದ ವರ್ಗ ಬಿ), ಮಂಜುನಾಥ್ (ಸಾಮಾನ್ಯ), ಸಣ್ಣೇಗೌಡ(ಸಾಮಾನ್ಯ), ವಿಠಲ್ ರಾವ್ ಪವಾರ್ (ಸಾಮಾನ್ಯ), ಮಹಾದೇವೇಗೌಡ(ಸಾಮಾನ್ಯ), ಶ್ರೀಕಂಠ(ಸಾಮಾನ್ಯ), ರುಕ್ಮಾಂಗದ (ಪ.ಪಂ), ತಿಮ್ಮನಾಯಕ(ಪ.ಪಂ), ಎಂ.ಮಹದೇವ(ಹಿ.ವರ್ಗ), ಬಿ.ಎಂ.ತಾರಕೇಶ್ವರಿ(ಮಹಿಳಾ ಮೀಸಲು), ಶೋಭಾ(ಮಹಿಳಾ ಮೀಸಲು), ಶ್ವೇತಾ ಹರೀಶ್ (ಸಾಲಗಾರರಲ್ಲದ ಕ್ಷೇತ್ರ) ಆಯ್ಕೆಯಾಗಿದ್ದಾರೆ.