ನಗರದ ವಿವಿಧ ಮಠಗಳಲ್ಲಿ ನಡೆದ ತಪ್ತ ಮುದ್ರಾಧಾರಣೆ; ಸಂಭ್ರಮದಿಂದ ಪಾಲ್ಗೊಂಡ ಭಕ್ತಸ್ತೋಮ

tapta
Published on

ಬೆಂಗಳೂರು :ಆಷಾಡ ಮಾಸದ ಏಕಾದಶಿಯ ಪ್ರಯುಕ್ತ ನಗರದ ವಿವಿಧ ಮಠಗಳಲ್ಲಿ ಬೆಳಗ್ಗೆಯಿಂದಲೇ ತಪ್ತಾ ಮುದ್ರಾಧಾರಣೆ ಕಾರ್ಯಕ್ರಮ ನಡೆಯಿತು. ಬೆಳಗ್ಗೆಯಿಂದ ಮಾಧ್ವ ಸಂಪ್ರದಾಯದ ಮಠಗಳಲ್ಲಿ ಗುರುಗಳಿಂದ ಮುದ್ರಾ ಧಾರಣೆ ಮಾಡಿಸಿಕೊಳ್ಳುವ ಉದ್ದೇಶದಿಂದ ಮಹಿಳೆಯರು, ಮಕ್ಕಳು, ವೃದ್ಧರು ಎಂಬ ಬೇಧವಿಲ್ಲದೆ ಎಲ್ಲ ವಯೋಮಾನದ ಭಕ್ತರು ಸರದಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವಿದ್ಯಾಪೀಠದಲ್ಲಿರುವ ಪೇಜಾವರ ಮಠದಲ್ಲಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಕ್ತರಿಗೆ ಮುದ್ರಾಧಾರಣೆ ಮಾಡಿ ಆಶೀರ್ವದಿಸಿದರು. ಬಸವನಗುಡಿಯಲ್ಲಿರುವ ಉತ್ತರಾದಿ ಮಠದಲ್ಲಿ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಕಿಕ್ಕಿರಿದು ಸೇರಿದ್ದ ಭಕ್ತರಿಗೆ ಮುದ್ರಾಧಾರಣೆ ಮಾಡಿದರು. ಜಯನಗರದಲ್ಲಿರುವ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಭಕ್ತರಿಗೆ ಮುದ್ರಾಧಾರಣೆ ಮಾಡಿದರು. ಇನ್ನುಳಿದಂತೆ ಪುತ್ತಿಗೆ ಮಠ, ಪಲಿಮಾರು ಮಠ, ವ್ಯಾಸರಾಜ ಮಠ ಮತ್ತಿತರ ಕಡೆಗಳಲ್ಲಿಯೂ ಬೆಳಗ್ಗೆಯಿಂದಲೇ ಭಕ್ತರಿಗೆ ಮುದ್ರಾಧಾರಣೆ ಮಾಡಲಾಯಿತು.

ಆಷಾಡ ಮಾಸದ ಏಕಾದಶಿಯಿಂದ ವಿಷ್ಣು ಯೋಗನಿದ್ರೆಗೆ ಜಾರುತ್ತಾನೆಂಬ ನಂಬಿಕೆ ಇದೇ ದಿನದಂದು ವೈಷ್ಣವ ಮತಾವಲಂಬಿ ಸನ್ಯಾಸಿಗಳು ತಮ್ಮ ಚಾತುರ್ಮಾಸ್ಯ ವ್ರತವನ್ನು ಆರಂಭಿಸುತ್ತಾರೆ. ಇಂತಹ ಸಂದರ್ಭದಲ್ಲಿ ಗುರುಗಳ ಸೇವೆ ಮಾಡುವುದು ಹಾಗೂ ಭಗವಂತ ಯೋಗ ನಿದ್ರೆಯಲ್ಲಿರುವ ಸಮಯದಲ್ಲಿ ಎಚ್ಚರದಿಂದಿರುವ ಸಂಕೇತವಾಗಿ ಬಿಸಿ ಮಾಡಿದ ಲೋಹದ ಮುದ್ರೆ ಗುರುತನ್ನು ಮೈಮೇಲೆ ಹಾಕಿಸಿಕೊಳ್ಳಲಾಗುತ್ತದೆ. ಶಂಖ ಮುದ್ರೆ, ಸುದರ್ಶನ ಮುದ್ರೆ ಇತ್ಯಾದಿ ಆಯಾ ಮಠಗಳ ಪದ್ಧತಿಯಂತೆ ಮುದ್ರೆಗಳನ್ನು ಹಾಕಲಾಯಿತು. ವೈಜ್ಞಾನಿಕವಾಗಿಯೂ ಈ ಮುದ್ರಾಧಾರಣೆಯಿಂದ ವಿವಿಧ ರೋಗ-ರುಜಿನಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net