

ಬೆಂಗಳೂರು: ಪ್ರಥಮ ಏಕಾದಶಿ ಪ್ರಯುಕ್ತ ಬೆಂಗಳೂರಿನ ಶ್ರೀ ರಾಘವೇಂದ್ರ ಸ್ವಾಮಿ ಮಠ, ಅದಮಾರು, ಪಲಿಮಾರು, ಸೋಸಲೆ, ಉತ್ತರಾಧಿ ಮಠ ಸೇರಿ ನಗರದ ಹಲವು ಮಠಗಳಲ್ಲಿ ಬುಧವಾರ ಮುಂಜಾನೆಯಿಂದ ರಾತ್ರಿವರೆಗೂ ತಪ್ತ ಮುದ್ರಾ ಧಾರಣೆಯು ಶಾಸಬದ್ಧವಾಗಿ ಹಾಗೂ ಅತ್ಯಂತ ಶ್ರದ್ಧೆ, ಭಕ್ತಿಯಿಂದ ನಡೆಯಿತು.
ಮಕ್ಕಳು, ಹಿರಿಯರವರೆಗೂ ವಯಸ್ಸಿನ ಭೇದವಿಲ್ಲದೆ ಸರತಿಯಲ್ಲಿ ಸಾಗುವ ಮೂಲಕ ಭಗವಂತನ ಚಿಹ್ನೆ (ಶಂಖ, ಚಕ್ರ)ಗಳ ಮುದ್ರಾ ಧಾರಣೆ ಮಾಡಿಸಿಕೊಂಡರು. ಜಯನಗರದ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂತ್ರಾಲಯದ ಪೀಠಾಧಿಪತಿ ಡಾ. ಶ್ರೀ ಸುಬುಧೇಂದ್ರತೀರ್ಥರು ಪ್ರಥಮ ಏಕಾದಶಿ ಪ್ರಯುಕ್ತ ಬಂಗಾರದ ತೊಟ್ಟಿಲಿನಲ್ಲಿ ಮೂಲ ರಾಮಚಂದ್ರ ದೇವರಿಗೆ ತೊಟ್ಟಿಲ ಸೇವೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ತಾವು ‘ತಪ್ತ ಮುದ್ರಾ ಧಾರಣೆಯನ್ನು ಸ್ವೀಕರಿಸಿ, ನಂತರ ಮಠದ ಶಿಷ್ಯರಿಗೆ ಮುದ್ರಾಧಾರಣೆ ಮಾಡಿದರು.
ನಗರದ ವಿದ್ಯಾಪೀಠ ವೃತ್ತದಲ್ಲಿನ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಉಡುಪಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಕ್ತರಿಗೆ ತಪ್ತ ಮುದ್ರಾಧಾರಣೆ ಮಾಡಿದರು. ಸೋಸಲೆಯ ಶ್ರೀ ವ್ಯಾಸರಾಜ ಮಠದಲ್ಲಿ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದರು ತಪ್ತ ಮುದ್ರಾ ಧಾರಣೆ ನಡೆಸಿಕೊಟ್ಟರು. ನಗರದ ಶ್ರೀ ಕೃಷ್ಣ ವಾದಿರಾಜ ಮಠದಲ್ಲಿ ಶ್ರೀ ವಿಶ್ವವಿಲ್ಲಭ ತೀರ್ಥರು ಭಕ್ತರಿಗೆ ತಪ್ತ ಮುದ್ರಾ ಧಾರಣೆ ಮಾಡಿದರು. ಉತ್ತರಾದಿ ಮಠದಲ್ಲಿ ಶ್ರೀಗಳು ಮುಂಜಾನಯಿಂದ ರಾತ್ರಿವರೆಗೂ ಭಕ್ತರಿಗೆ ತಪ್ತ ಮುದ್ರಾ ಧಾರಣೆ ಮಾಡಿದರು.