ಪ್ರಯಾಗದಲ್ಲಿ ಕಾಶಿ ಜಗದ್ಗುರುಗಳ ತಪೋನುಷ್ಠಾನ; ಕುಂಭಮೇಳಕ್ಕೆ ಬರುವವರಿಗೆ ಊಟ-ವಸತಿ ವ್ಯವಸ್ಥೆ

kumba
Published on

ಬೆಂಗಳೂರು: ಉತ್ತರ ಪ್ರದೇಶದ ಪ್ರಯಾಗರಾಜ ಕ್ಷೇತ್ರದಲ್ಲಿ ನಡೆಯುತ್ತಿರುವ ಮಹಾಕುಂಭದ ಹಿನ್ನೆಲೆಯಲ್ಲಿ ಕಾಶೀ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಜ.14ರಿಂದ 44 ದಿನಗಳ ತಪೋನುಷ್ಠಾನ ಹಮ್ಮಿಕೊಂಡಿದ್ದಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ಪುಣ್ಯನದಿಗಳ ತ್ರಿವೇಣಿಸಂಗಮ ಕ್ಷೇತ್ರ ಪ್ರಯಾಗರಾಜದಲ್ಲಿ ಪ್ರತೀ 12 ವರ್ಷಗಳಿಗೊಮ್ಮೆ ಜರುಗುವ ಮಹಾಕುಂಭ ಮೇಳವು ಜಗತ್ತಿನ ಅತಿದೊಡ್ಡ ಧಾರ್ಮಿಕ ಉತ್ಸವವವಾಗಿದ್ದು, ಪ್ರಯಾಗರಾಜ ದಶಾಶ್ವಮೇಧ ಘಾಟದಲ್ಲಿರುವ ಕಾಶಿ ಪೀಠದ ಪ್ರಾಚೀನ ಜಂಗಮವಾಡಿ ಮಠದ ಶ್ರೀಪ್ರಯಾಗರಾಜೇಶ್ವರ ಸನ್ನಿಧಿಯಲ್ಲಿ ಮಕರ ಸಂಕ್ರಮಣದಿಂದ ಮಹಾಶಿವರಾತ್ರಿಯವರೆಗೆ 44 ದಿನಗಳ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಬೆಳಗ್ಗೆ ಗಂಗಾನದಿಯಲ್ಲಿ ಕುಂಭಸ್ನಾನ ನಂತರ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಹಾಗೂ ಸಂಜೆ ನಡೆಯುವ ಧರ್ಮ ಸಮಾರಂಭದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಸೇರಿ ದೇಶದ ವಿವಿಧ ರಾಜ್ಯಗಳ ಹಾಗೂ ವಿದೇಶಗಳಲ್ಲಿರುವ ಕಾಶೀ ಪೀಠದ ಸಾವಿರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ.

ಕುಂಭಮೇಳಕ್ಕೆ ಆಗಮಿಸುವವರಿಗೆ ಊಟ-ವಸತಿ ವ್ಯವಸ್ಥೆ

ಮಹಾಕುಂಭ ಮೇಳದ ಅಂಗವಾಗಿ ಪ್ರಯಾಗದ ಜಂಗಮವಾಡಿ ಮಠವನ್ನು ನವೀಕೃತವಾಗಿ ಜೀರ್ಣೋದ್ಧಾರ ಮಾಡಲಾಗಿದೆ. ಫೆ.4 ರಂದು ಕಾಶೀ, ಶ್ರೀಶೈಲ ಮತ್ತು ಉಜ್ಜಯಿನಿ ಜಗದ್ಗುರುಗಳ ಐತಿಹಾಸಿಕ ಅಡ್ಡಪಲ್ಲಕ್ಕಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಕಲಬುರ್ಗಿ ಜಿಲ್ಲೆಯ ಶಾಖಾಪುರ ತಪೋವನ ಮಠದ ಡಾ. ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಕರ್ನಾಟಕದಿಂದ ವಿಶೇಷ ರೈಲಿನ ಮೂಲಕ ಭಕ್ತರು, ವಿವಿಧ ಜಾನಪದ, ಕಲಾ ಮೇಳಗಳ ಕಲಾವಿದರು ಆಗಮಿಸಲಿದ್ದು, ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಕುಂಭಮೇಳಕ್ಕೆ ಆಗಮಿಸುವ ದಕ್ಷಿಣಭಾರತದ ಎಲ್ಲ ಭಕ್ತರಿಗೆ ಜಂಗಮವಾಡಿ ಮಠದಲ್ಲಿ ಊಟ, ವಸತಿ ವ್ಯವಸ್ಥೆಯನ್ನು ಕೈಗೊಳ್ಳಲಾಗಿದ್ದು, ಹೆಚ್ಚಿನ ಮಾಹಿತಿಗೆ ಆರ್.ಕೆ.ಸ್ವಾಮಿ 9422321166, ಶಿವಾನಂದಸ್ವಾಮಿ ಹಿರೇಮಠ : 9585011008 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net