

ಹಿರೇಕೆರೂರ: ತಾಲೂಕು ವ್ಯವಸಾಯ ಉತ್ಪನ್ನ ಸಹಕಾರಿ ಮಾರಾಟ ಸಂಘ ರೈತರಿಗೆ ಸೇವೆ ಸಲ್ಲಿಸುತ್ತಾ, ಅಭಿವೃದ್ಧಿ ಪಥದತ್ತ ಸಾಗಿ ಹೆಮ್ಮರವಾಗಿ ಬೆಳೆದಿದೆ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಎಸ್. ಪಾಟೀಲ ಹೇಳಿದರು.
ಪಟ್ಟಣದ ತರಳಬಾಳು ಸಾಂಸ್ಕೃತಿಕ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಂಘದ 64ನೇ ವಾರ್ಷಿಕ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
1959ರಲ್ಲಿ ಹಿರಿಯರಾದ ದಿ.ಬಿ.ಜಿ. ಬಣಕಾರ ಅವರ ನೇತೃತ್ವದಲ್ಲಿ ತಾಲೂಕಿನ ಸಹಕಾರಿಗಳ ಸಹಕಾರದಿಂದ 75 ಸದಸ್ಯರಿಂದ ರೂ. 7,845 ಬಂಡವಾಳದಿಂದ ಟಿಎಪಿಸಿಎಂಎಸ್ ಪ್ರಾರಂಭಗೊಂಡಿದೆ. ಆಡಳಿತ ಮಂಡಳಿ, ಸದಸ್ಯರು ಹಾಗೂ ನೌಕರರ ನಿರಂತರ ಪರಿಶ್ರಮದಿಂದ, ಪ್ರಾಮಾಣಿಕತೆಯಿಂದ ಉತ್ತರೋತ್ತರವಾಗಿ ಅಭಿವೃದ್ಧಿ ಹೊಂದಿದೆ. ರಸಗೊಬ್ಬರ, ಡೀಸೆಲ್, ಪೆಟ್ರೋಲ್ ಮತ್ತು ಕೃಷಿ ಸಾಮಗ್ರಿಗಳನ್ನು ಒದಗಿಸಿ, ರಾಜ್ಯದಲ್ಲಿಯೇ ಮಾದರಿ ಸಂಸ್ಥೆಯಾಗಿದೆ ಎಂದರು.
ಸಂಘವು ಒಟ್ಟು 58.76 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಮುಂಬರುವ ದಿನಗಳಲ್ಲಿ ಸಂಘದ ಪ್ರಧಾನ ಕಚೇರಿ ಹಾಗೂ ಶಾಖೆಗಳ ಕಟ್ಟಡ ಮತ್ತು ಉಗ್ರಾಣ ನವೀಕರಿಸಲಾಗುವುದು. ಎಲ್ಲ ಲೆಕ್ಕಪತ್ರ ಗಣಕೀಕರಣಗೊಳಿಸುವುದು, ಎಲ್ಲ ಶಾಖೆಗಳಲ್ಲಿ ಕ್ರಿಮಿನಾಶಕ ಹಾಗೂ ಬೀಜ ಮಾರಾಟ ವ್ಯವಸ್ಥೆ ಮಾಡಲಾಗವುದು ಎಂದರು.
ಟಿಎಪಿಸಿಎಂಎಸ್ ಉಪಾಧ್ಯಕ್ಷ ಯು.ಎಸ್. ಕಳಗೊಂಡದ ವಾರ್ಷಿಕ ವರದಿ ವಾಚನ ಮಾಡಿದರು. ಸಂಘದ ಆಡಳಿತ ಮಂಡಳಿ ನಿರ್ದೇಶಕರಾದ ಎಸ್.ಬಿ. ತಿಪ್ಪಣ್ಣನವರ, ಆರ್.ಎಸ್. ಪಾಟೀಲ, ಮಹೇಶ ಗುಬ್ಬಿ, ಎನ್.ವೈ. ಲೆಕ್ಕಪ್ಪಳವರ, ಭೀಮಪ್ಪ ಯತ್ತಿನಹಳ್ಳಿ, ಎಚ್.ಎಂ. ಶಂಕ್ರನಹಳ್ಳಿ, ಹೂವಪ್ಪ ಕವಲಿ, ಎಸ್.ಆರ್. ಹೊಂಡದ, ವಿ.ಬಿ. ಗಂಗನಗೌಡ್ರ, ಮಂಜುಳಾ ಬಾಳಿಕಾಯಿ, ಜೆ.ಬಿ. ಸನ್ನೇರ, ಎಸ್.ಸಿ. ನಾಗಪ್ಪನವರ, ಎಂ.ಎಚ್. ಪಾಟೀಲ, ಪ್ರಧಾನ ವ್ಯವಸ್ಥಾಪಕ ಬಿ.ಜಿ. ಬಣಕಾರ, ಸಹಾಯಕ ವ್ಯವಸ್ಥಾಪಕ ಅರುಣಕುಮಾರ ಬಸನಗೌಡ್ರ, ಸಿಬ್ಬಂದಿ ನವೀನಕುಮಾರ, ಕರೇಗೌಡ ನೇಸ್ವಿ, ಸಿದ್ದನಗೌಡ ಗಿರಿಮಳ್ಳಿ, ಕುಮಾರ ಬಾಳಂಬೀಡ, ನಾಗರಾಜ ಹುಲ್ಲತ್ತಿ, ನಾಗಪ್ಪ ಹಂಚಿನೇರ ಸೇರಿದಂತೆ ಆಜೀವ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.