ಹಣ ದುರ್ಬಳಕೆ ಮಾಡಿಕೊಂಡರೆ ಪ್ರಕರಣ ದಾಖಲಿಸಿ: ಟಿಎಪಿಸಿಎಂಎಸ್ ವಾರ್ಷಿಕ ಮಹಾಸಭೆಯಲ್ಲಿ ಷೇರುದಾರರ ಆಗ್ರಹ

23-pnp 1
Published on

ಪಾಂಡವಪುರ: ಸಂಸ್ಥೆಯ ಹಣ ದುರ್ಬಳಕೆ ಮಡಿಕೊಂಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಹಣ ವಸೂಲಾತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಷೇರುದಾರರು ಟಿಎಪಿಸಿಎಂಎಸ್‌ನ ವಾರ್ಷಿಕ ಮಹಾಸಭೆಯಲ್ಲಿ ಆಗ್ರಹಿಸಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಅಧ್ಯಕ್ಷ ಡಿ.ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಷೇರುದಾರರು ಮತನಾಡಿದರು. ಸಂಸ್ಥೆಯ ಈ ಹಿಂದಿನ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರು 4.5 ಲಕ್ಷ ರೂ. ಹಾಗೂ ನೌಕರನೊಬ್ಬ 14 ಲಕ್ಷ ರೂ. ದುರುಪಯೋಗಪಡಿಸಿಕೊಂಡಿದ್ದಾರೆ. ಪ್ರತಿ ಸಭೆಯಲ್ಲೂ ಈ ವಿಚಾರ ಚರ್ಚೆಗೆ ಬರುತ್ತಿದೆ. ಹೀಗಾಗಿ ಹಣ ವಸೂಲಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ನೌಕರನ ಪ್ರಕರಣ ನ್ಯಾಯಾಲಯದಲ್ಲಿ ಇದೆ ಎಂದು ಸುಮ್ಮನಾಗಬಾರದು. ಅಮಾನತುಪಡಿಸಿರುವ ಆತನ ಭವಿಷ್ಯ ನಿಧಿ ಹಣವನ್ನು ಸಂಸ್ಥೆಗೆ ಜಮಾ ಮಾಡಿಕೊಳ್ಳಲು ನ್ಯಾಯಾಲಯದಿಂದ ಅನುಮತಿ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಸಂಸ್ಥೆಯ ನಿರ್ದೇಶಕರು ಸೇರಿದಂತೆ ಯಾವುದೇ ವ್ಯಕ್ತಿಗಳ ಶಿಫಾರಸಿನ ಮೇಲೆ ಕೆಲಸಕ್ಕೆ ತೆಗೆದುಕೊಂಡ ನೌಕರರು ಸಂಸ್ಥೆಯ ಹಣ ದುರುಪಯೋಗಪಡಿಸಿಕೊಂಡರೆ ಅದಕ್ಕೆ ಅವರೇ ಜವಬ್ದಾರರು ಎಂಬ ಕರಾರಿನ ಮೇಲೆ ನೌಕರರನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಇಲ್ಲವಾದರೆ ಈ ರೀತಿಯ ಅಕ್ರಮಗಳು ನಡೆದು ಸಂಸ್ಥೆ ನಷ್ಟಕ್ಕೀಡಾಗುತ್ತದೆ. ಹೀಗಾಗಿ ಎಚ್ಚರಿಕೆಯ ಕ್ರಮಗಳನ್ನು ವಹಿಸುವಂತೆ ಷೇರುದಾರರು ಸಲಹೆ ನೀಡಿದರು.

ಕೆಲ ನಿರ್ದೇಶಕರು ಪ್ರತಿ ಬಾರಿ ವಾರ್ಷಿಕ ಮಹಾಸಭೆಗೆ ಗೈರಾಗುತ್ತಾರೆ ಎಂದರೆ ಅವರಿಗೆ ಸಂಸ್ಥೆಯ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ ಎಂದರ್ಥ. ಮಹಾಸಭೆಗೆ ಪ್ರತಿಯೊಬ್ಬ ನಿರ್ದೇಶಕರು ಕಡ್ಡಾಯವಾಗಿ ಹಾಜರಾಗಬೇಕು ಎಂದು ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು.

ಸಭೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ತಿಬ್ಬಮ್ಮ, ನಿರ್ದೇಶಕರಾದ ಕನಗನಹಳ್ಳಿ ರಾಮಕೃಷ್ಣೇಗೌಡ, ಕಣಿವೆ ಯೋಗೇಶ್, ಕ್ಯಾತನಹಳ್ಳಿ ಎಸ್.ದಯಾನಂದ್, ಹಿರೇಮರಳಿ ಮಧು, ಗುರುಸ್ವಾಮಿ, ಚಿಕ್ಕಾಡೆ ಶ್ರೀಕಾಂತ್, ಬೆಟ್ಟಸ್ವಾಮಿಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net