

ಮಾಯಕೊಂಡ: ಮಾಯಕೊಂಡ ಗ್ರಾಮಕ್ಕೆ ಕುಡಿಯುವ ನೀರಿನ ಸಮರ್ಪಕ ಪೂರೈಕೆ, ರುದ್ರಭೂಮಿ ಅಭಿವೃದ್ಧಿ, ಜೆಜೆಎಂ ಯೋಜನೆ ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗ್ರಾಪಂನ ಕೆಲವು ಸದಸ್ಯರು ಮಂಗಳವಾರ ಮತ್ತು ಬುಧವಾರ ಪಂಚಾಯಿತಿ ಎದುರು ಧರಣಿ ನಡೆಸಿದರು.
ಪ್ರತಿಭಟನೆ ಸುದ್ದಿ ತಿಳಿದು ಬುಧವಾರ ಗ್ರಾಪಂಗೆ ಭೇಟಿ ನೀಡಿದ ತಾಪಂ ಇಒ ರಾಮಭೋವಿ ಪರಿಸ್ಥಿತಿ ಅವಲೋಕನ ಮಾಡಿದರು.
ಈ ವೇಳೆ ಪ್ರತಿಭಟನಾನಿರತ ಸದಸ್ಯ ಉಳ್ಳಾಗಡ್ಡೆ ಲಕ್ಷ್ಮಣ ಮಾತನಾಡಿ, ಬಹುಗ್ರಾಮ ಕುಡಿಯುವ ನೀರಿನ (ರಾಜೀವ ಗಾಂಧಿ ಸಬ್ ಮಿಷನ್) ಶುದ್ಧೀಕರಣಕ್ಕೆ ಅಳವಡಿಸಿರುವ ನೀರಿನ ಟ್ಯಾಂಕ್ಗಳು ಪಾಚಿ ಕಟ್ಟಿದೆ. ಗುತ್ತಿಗೆದಾರ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. 8- 10 ದಿನಗಳಿಗೊಮ್ಮೆ ಗ್ರಾಮಕ್ಕೆ ನೀರು ಸರಬರಾಜು ಆಗುತ್ತದೆ. ಕನಿಷ್ಠ ಎರಡು ಅಥವಾ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಬೇಕು ಎಂದರು.
ರುದ್ರಭೂಮಿಯ ಅಭಿವೃದ್ಧಿಗೆ 40 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು ಸಮರ್ಪಕವಾಗಿ ಕಾಮಗಾರಿಯಾಗಿಲ್ಲ. ಗ್ರಾಮದೊಳಗೆ ಜೆಜೆಎಂ ಕೆಲಸವಾಗಿಲ್ಲ. ಕೆಪಿಎಸ್ ಶಾಲಾ ಮೈದಾನದಲ್ಲಿ ರನ್ನಿಂಗ್ ಟ್ರ್ಯಾಕ್ ಕಾಮಗಾರಿ ಪೂರ್ತಿಯಾಗಿಲ್ಲ. 8- 10 ಲಕ್ಷ ರೂ. ಅನುದಾನದಲ್ಲಿ ಗ್ರಾಪಂ ಸಭಾಂಗಣದ ಅವಶ್ಯಕತೆ ಇರಲಿಲ್ಲ, ಆದರೂ ಮಾಡಿದ್ದಾರೆ. ಸಾರ್ವಜನಿಕರ ಪ್ರಶ್ನೆಗಳಿಗೆ ಸದಸ್ಯರು ಉತ್ತರಿಸಲಾಗುತ್ತಿಲ್ಲ. ಆದ್ದರಿಂದ ಹೆಚ್ಚಿನ ಅನುದಾನ ನೀಡಿ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯ ಮಾಡಿದರು.
ಸದಸ್ಯೆ ಪುಷ್ಪ ಉಮಾಶಂಕರ್ ಮಾತನಾಡಿ, ಇಲ್ಲಿನ ಗ್ರೇಡ್ ಒನ್ ಗ್ರಾಪಂಗೆ ಕಾಯಂ ಪಿಡಿಒ ಹಾಕಬೇಕು. ಪಿಡಿಒ, ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮ ಸಭೆ ಹಾಗೂ ವಾರ್ಡ್ ಸಭೆ ಆಯೋಜಿಸಬೇಕು ಎಂದು ಒತ್ತಾಯಿಸಿದರು.
ಇಒ ರಾಮಭೋವಿ ಮಾತನಾಡಿ, ರುದ್ರಭೂಮಿ ಕಾಮಗಾರಿ ತ್ವರಿತಕ್ಕೆ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು. ಗ್ರಾಮದಲ್ಲಿ 3.26 ಕೋಟಿ ರೂ. ಅನುದಾನದಿಂದ ಜೆಜೆಎಂ ಹೊಸ ಕಾಮಗಾರಿಗಾಗಿ ಅನುಮೋದನೆಗೆ ಕಳುಹಿಸಲಾಗಿದೆ. ಅನುಮೋದನೆ ಸಿಕ್ಕ ನಂತರ ಮರು ಟೆಂಡರ್ ಕರೆಯಲಾಗುವುದು ಎಂದರು. ನೀರಿನ ಶುದ್ಧೀಕರಣ ಹಾಗೂ ಸಮರ್ಪಕ ಪೂರೈಕೆ ಮಾಡಲು ಇಂಜಿನಿಯರ್ಗೆ ಕರೆ ಮಾಡಿ ಎಚ್ಚರಿಕೆ ನೀಡಿದರು.
ಗ್ರಾಪಂ ಅಧ್ಯಕ್ಷೆ ಸಾಕಮ್ಮ ಲಿಂಗರಾಜ್, ಪಿಡಿಒ ಎನ್. ಶ್ರೀನಿವಾಸ್, ಪಿಎಸ್ಐ ಎಸ್.ಬಿ. ಅಜಯ್, ಮುಖಂಡರಾದ ಎಂ.ಜಿ. ಗೋಪಾಲ್, ಎಂ.ಜಿ. ಗುರುನಾಥ್, ರಾಮಜೋಗಿ ಪ್ರತಾಪ್, ಎಂ.ಜಿ. ಲಿಂಗರಾಜ್, ಎಲ್.ಜೆ. ಉಮಾಶಂಕರ್, ರಾಜಶೇಖರ್ ಸಂಡೂರ್, ಜಿ.ಬಿ. ಮಲ್ಲೇಶ್, ಬೀರಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಶಿವಮ್ಮ ಮಲ್ಲಿಕಾರ್ಜುನ್, ಲತಾ ಮಲ್ಲಿಕಾರ್ಜುನ್ ಇತರರಿದ್ದರು.