ಪಡೆದ ಸಾಲ ಸದ್ಬಳಕೆಯಾಗಲಿ

18 HNL
Published on

ಹೊನ್ನಾಳಿ: ಈ ಹಿಂದೆ ಸಾಲ ಬೇಕು ಎಂದರೆ ಬ್ಯಾಂಕುಗಳಿಗೆ ಹುಡುಕಿಕೊಂಡು ಹೋಗಬೇಕಾಗಿತ್ತು. ಈಗ ಬ್ಯಾಂಕುಗಳೇ ಜನರ ಬಳಿಗೆ ಸಾಲ ನೀಡಲು ಬರುತ್ತಿವೆ ಎಂದು ತಾ.ಪಂ. ಇಒ ಪ್ರಕಾಶ್ ಹೇಳಿದರು.

ಇಲ್ಲಿನ ತಾ.ಪಂ. ಸಾಮರ್ಥ್ಯ ಸೌಧದಲ್ಲಿ ಸೋಮವಾರ ಅವಳಿ ತಾಲೂಕಿನ 21 ಸ್ವಸಹಾಯ ಮಹಿಳಾ ಗುಂಪುಗಳಿಗೆ 1.37 ಕೋಟಿ ರೂ. ಮೊತ್ತದ ಚೆಕ್​ಗಳನ್ನು ವಿತರಿಸಿ ಮಾತನಾಡಿದರು.

ಕೊಟ್ಟ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿದರೆ ಬೇರೆ ಮಹಿಳಾ ಸ್ವಸಹಾಯ ಗುಂಪುಗಳಿಗೂ ಸಾಲದ ನೆರವು ಸಿಗುತ್ತದೆ. ತೆಗೆದುಕೊಂಡ ಸಾಲವನ್ನು ಸದ್ಬಳಕೆ ಮಾಡಿಕೊಂಡು, ಅದರಿಂದ ಬರುವ ಲಾಭವನ್ನು ಸಾಲ ಮರುಪಾವತಿ ಮಾಡಿ ಎಂದು ತಿಳಿಸಿದರು.

ಹೊನ್ನಾಳಿ ತಾಲೂಕಿನ 90 ಹಾಗೂ ನ್ಯಾಮತಿಯ 33 ಸಂಘಗಳಿಂದ ಸಾಲಕ್ಕಾಗಿ ಬೇಡಿಕೆ ಬಂದಿದ್ದು, ಅದರಲ್ಲಿ 23 ಸಂಘಗಳಿಗೆ ಬ್ಯಾಂಕುಗಳು ಸಾಲ ಸೌಲಭ್ಯ ನೀಡಿವೆ. ಮಹಿಳೆಯರು ಸಾಲ ಸೌಲಭ್ಯದಿಂದ ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ಉದ್ದೇಶವನ್ನು ಈ ಸಾಲಮೇಳ ಹೊಂದಿದೆ ಎಂದು ಹೇಳಿದರು.

ಸಂಘದ ಮಹಿಳೆಯರು ಹಳೆಯ ಉದ್ಯೋಗಗಳ ಬದಲಿಗೆ ಹೊಸ ಉದ್ಯೋಗ ಮಾಡಲು ಮುಂದೆ ಬರಬೇಕು, ಕೋಳಿ ಸಾಕಾಣಿಕೆ ಮಾಡಿದರೆ ಮೊಟ್ಟೆ ಮಾರಾಟದಿಂದ ಆದಾಯಗಳಿಸಬಹುದು. ಬಾಳೆ ನಾರುವಿನಿಂದ ವಿವಿಧ ವಸ್ತುಗಳ ಉತ್ಪಾದನೆ, ಅಣಬೆ ಬೆಳೆಯುವುದು, ಹೂವಿನ ಬೇಸಾಯದಂತಹ ಉದ್ಯೋಗಗಳತ್ತ ಒಲವು ತೋರಿದರೆ ಒಳಿತು ಎಂದು ಹೇಳಿದರು.

ಎನ್​ಆರ್​ಎಲ್​ಎಂನ ಆಶಾ ಮಾತನಾಡಿ, ಕೆನರಾ ಬ್ಯಾಂಕ್, ಎಚ್​ಡಿಎಫ್​ಸಿ, ಎಸ್​ಬಿಐ, ಡಿಸಿಸಿ ಹಾಗೂ ಐಸಿಐಸಿ ಬ್ಯಾಂಕುಗಳು ಈ ಸಾಲ ಸೌಲಭ್ಯ ಕೊಟ್ಟಿವೆ ಎಂದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್​ನ ವ್ಯವಸ್ಥಾಪಕ ಎಸ್.ಎಸ್. ಆಚಾರ್ಯ, ಎಫ್​ಎಲ್​ಸಿ ಶಿವಪ್ಪ, ಟಿಪಿಎಂ ಧರ್ಮಣ್ಣ ಮಾತನಾಡಿದರು. ನ್ಯಾಮತಿ ತಾ.ಪಂ. ಇಒ ರಾಘವೇಂದ್ರ, ಹೊನ್ನಾಳಿ ತಾ.ಪಂ. ಸಹಾಯಕ ನಿರ್ದೇಶಕ ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net