

ಮೈಸೂರು: ಮುಖ್ಯಮಂತ್ರಿ ಆಗುವ ಅರ್ಹತೆ ನನಗೂ ಇದೆ. ಜನರಿಂದ ಆಯ್ಕೆಯಾದವರು ಅಂತಹ ಬಯಕೆ ಇಟ್ಟುಕೊಳ್ಳಬಾರದು ಅಂಥೇನಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ತನ್ವೀರ್ ಸೇಠ್, "ಉಪ ಚುನಾವಣೆ ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿದ್ದಾರೆ' ಎಂಬ ಶಾಸಕ ಜಮೀರ್ ಅಹಮದ್ ಹೇಳಿಕೆಗೆ ತಿರುಗೇಟು ನೀಡಿದರು. ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದು ಪಕ್ಷದ ವರಿಷ್ಠರ ತೀರ್ಮಾನವೇ ಹೊರತು ಜಮೀರ್ ಹೇಳಿದಂತೆ ಆಗುವುದಿಲ್ಲ. ಜಮೀರ್ಗೆ ಕಾಂಗ್ರೆಸ್ ಪಕ್ಷದ ಸಿದ್ಧಾಂತವೇ ತಿಳಿದಿಲ್ಲ. ಅವರು ಹೇಳಿದಂತೆ ಯಾವುದೂ ಆಗುವುದಿಲ್ಲ. ಮುಖ್ಯಮಂತ್ರಿ ಆಗಲು ಅಂಕಿ-ಸಂಖ್ಯೆ ಮುಖ್ಯ. ನಾಯಕನಾದವನ ಬಳಿ ಸಂಖ್ಯೆ ಇದ್ದರೆ ಮಾತ್ರ ಸಿಎಂ ಆಗಬಹುದು. ಇಷ್ಟಕ್ಕೂ ಸಿಎಂ ಯಾರಾಗಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ ಎಂದರು.
ಮುಂದೆ ಯಾರು ಮುಖ್ಯಮಂತ್ರಿ ಆಗುತ್ತಾರೆ ಎಂಬುದು ಸದ್ಯಕ್ಕೆ ಮುಖ್ಯವಲ್ಲ. ಬದಲಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಬಿಜೆಪಿ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಯಾವುದೇ ಸಂಶಯವಿಲ್ಲ. ಬಂದಾಗ ಅಂಕಿ-ಸಂಖ್ಯೆಗೆ ಅನುಗುಣವಾಗಿ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ತನ್ವೀರ್ ಸೇಠ್ ಹೇಳಿದರು.