

ಉಡುಪಿ: ದೇಶ ಕಾಯುವ ಕಾಯಕದಿಂದ ಸೈನಿಕರು ಯೋಧರಾಗಿ ಗುರುತಿಸಿಕೊಂಡಂತೆಯೇ ಯುವ ಪ್ರತಿಭೆ ತನುಶ್ರೀ ಪಿತ್ರೋಡಿ ಭಾರತದ ಸಂಸತಿಯಾದ ಯೋಗವನ್ನು ವಿಶಿಷ್ಟವಾಗಿ ಪ್ರಚುರ ಪಡಿಸುವ ಮೂಲಕ ಯೋಗದ ಯೋಧೆ ಆಗಿದ್ದಾರೆ ಎಂದು ಉಡುಪಿ ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಸುಭಾಸ್ ಬೈಲೂರು ಶ್ಲಾಘಿಸಿದರು.
ಉಡುಪಿಯ ಸೈಂಟ್ ಸಿಸಿಲಿಸ್ ಪ್ರೌಢಶಾಲೆಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ತನು ಯೋಗ ಭೂಮಿ 100ರ ಸಂಭ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉದ್ಯಮಿ ಗಾಯತ್ರಿ ಮುತ್ತಪ್ಪ ಕೋಲಾರ ಮಾತನಾಡಿದರು. ಸೈಂಟ್ ಸಿಸಿಲಿಸ್ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಮಯೋಲಾ ಅಧ್ಯಕ್ಷತೆ ವಹಿಸಿದ್ದರು. ನೃತ್ಯಗುರು ರಾಮಕೃಷ್ಣ ಕೊಡಂಚ, ಕಾರ್ತಿಕ್ ಕಡೆಕಾರ್, ವಿಜಯಕುಮಾರ್, ರಾಕೇಶ್ ಕಟಪಾಡಿ, ಉಡುಪಿ ಪ್ರೆಸ್ಕ್ಲಬ್ ಅಧ್ಯಕ್ಷ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು. ಉದಯಕುಮಾರ ಪಿತ್ರೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಲನಟಿ ರಿತುಶ್ರೀ ಪಿತ್ರೋಡಿ ಪ್ರಾರ್ಥಿಸಿದರು. ಸಂಧ್ಯಾ ಪಿತ್ರೋಡಿ ಸಹಕರಿಸಿದರು. ನಾಗರಾಜ ವರ್ಕಾಡಿ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ: ನಿವೃತ್ತ ಯೋಧ ವ್ಯಾಸರಾಜ ಶರವೂರು, ಕೃಷಿಕ ಜ್ಯೂಲಿಯನ್ ದಾಂತಿ, ರಂಗಭೂಮಿ ಕಲಾವಿದ ಗಂಗಾಧರ ಕಿದಿಯೂರು, ನಗರಸಭೆಯ ಸ್ವಚ್ಛತಾ ಸಿಬ್ಬಂದಿ ಸುರೇಶ್ ಪಿ., ಕನ್ನಡ ಉಪನ್ಯಾಸಕ, ಯುವ ಪ್ರತಿಭೆ ಧೀರಜ್ ಬೆಳ್ಳಾರಿ, ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಹಾಗೂ ರಾಷ್ಟ್ರೀಯ ಯೋಗಪಟುಗಳಾದ ನಾಜಿಯಾ ಕಾರ್ಕಳ, ಅನ್ವಿ ಅಂಚನ್, ಉದ್ಭವ್ ಜಿ. ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.
ನೃತ್ಯದ ಮೂಲಕ ಸಂಸತಿ ಅನಾವರಣ
ಯೋಗ ಪಿತಾಮಹ ಪತಂಜಲಿ ಋಷಿಯ ಕುರಿತು, ಯೋಗದ ಮಹತ್ವ, ಯೋಗಾಭ್ಯಾಸದಿಂದ ಆಗುವ ಪ್ರಯೋಜನ ಹಾಗೂ ಭಾರತ ದೇಶದ ವಿಶಿಷ್ಟತೆಯ ಕುರಿತು ಯೋಗಪಟು ತನುಶ್ರೀ ಪಿತ್ರೋಡಿ ಯೋಗನೃತ್ಯದ ಮೂಲಕ ಗಮನ ಸೆಳೆದರು. 40 ನಿಮಿಷಗಳ ಕಾಲ ವಿವಿಧ ಯೋಗಾಸನದ ಪ್ರಕಾರಗಳನ್ನು ಪ್ರದರ್ಶಿದರು. ತನ್ನ ಸಾವಿನ ಬಳಿಕ ಆ ಸುದ್ದಿಯನ್ನು ಮನೆಯವರಿಗೆ ಹೇಗೆ ತಿಳಿಸಬೇಕು ಎಂದು ಯೋಧನೊಬ್ಬ ತನ್ನ ಗೆಳೆಯನಿಗೆ ಬರೆದ ಪತ್ರದ ಸಾರಾಂಶವನ್ನು ಮನೋಜ್ಞವಾಗಿ ಅರುಹಿದ ತನುಶ್ರೀ ಮಾತುಗಳಿಂದ ಪ್ರೇಕ್ಷಕರ ಕಣ್ಣಲ್ಲಿ ನೀರು ತುಂಬಿತ್ತು. ಭಾವನಾತ್ಮಕವಾದ ಹಾಗೂ ವಿಶಿಷ್ಟ "ತನು ಯೋಗ ಭೂಮಿ' ಕಾರ್ಯಕ್ರಮ ಮೆಚ್ಚುಗೆ ಗಳಿಸಿತು.