

ಗಂಗಾವತಿ: ಕಾರಟಗಿ ತಾಲೂಕಿನ ಬರಗೂರು ಕ್ರಾಸ್ ಬಳಿ ನರೇಗಾ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಟಂಟಂ ಪಲ್ಟಿಯಾಗಿದ್ದು, 28 ಕಾರ್ಮಿಕರಿಗೆ ಗಾಯಗಳಾಗಿವೆ. ನಗರದ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಕಾರ್ಮಿಕರು ಯೋಜನೆಯ ಲಾಭ ಪಡೆದುಕೊಳ್ಳಿ
ಮುಷ್ಟೂರು ಗ್ರಾಪಂ ವ್ಯಾಪ್ತಿ ಕೂಲಿಕಾರರನ್ನು ತಾಲೂಕಿನ ಜೀರಾಳ್ ಕೆರೆ ಹೂಳೆತ್ತುವ ಕಾಮಗಾರಿಗಾಗಿ ಟಂಟಂನಲ್ಲಿ ಕರೆದೊಯ್ಯಲಾಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ತೀವ್ರ ಗಾಯಗೊಂಡ ಮೂವರನ್ನು ಹುಬ್ಬಳ್ಳಿ ಕಿಮ್ಸ್‌ಗೆ ಕರೆದೊಯ್ಯಲಾಗಿದೆ. ಸಣ್ಣ ವಾಹನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಇದ್ದರಿಂದ ಪಲ್ಟಿಯಾಗಲು ಕಾರಣ ಎನ್ನಲಾಗಿದೆ.
ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಉಪವಿಭಾಗ ಆಸ್ಪತ್ರೆ ದೌಡಾಯಿಸಿದ್ದು, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಎಲ್ಲ ಗಾಯಾಳುಗಳಿಗೆ ನಿಗಾವಹಿಸಬೇಕಿದ್ದು, ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡುವಂತೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿಗೆ ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಟಂಟಂ ವಾಹನದಲ್ಲಿ ಕೂಲಿಕಾರರನ್ನು ಕಳುಹಿಸಿದ್ದು ತಪ್ಪು ಈ ಬಗ್ಗೆ ನರೇಗಾ ಯೋಜನೆ ಉಸ್ತುವಾರಿಗಳಿಂದ ಮಾಹಿತಿ ಪಡೆಯಲಾಗುವುದು. ಕಾರ್ಮಿಕರನ್ನು ನಿರ್ಲಕ್ಷಿಸಿದ ಮತ್ತು ಕರ್ತವ್ಯ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಮುಷ್ಟೂರು ಗ್ರಾಪಂ ಪಿಡಿಒ ಸಾಯಿನಾಥ್ ಅವರನ್ನು ಅಮಾನತುಗೊಳಿಸುವಂತೆ ಜಿಪಂಗೆ ಸೂಚಿಸಿದ್ದೇನೆ.
ನರೇಗಾ ಯೋಜನೆ ಕೂಲಿಕಾರರನ್ನು ಟಂಟಂ ವಾಹನದಲ್ಲಿ ಕರೆದೊಯ್ಯುವುದು ಅಪರಾಧ. ಇಂತಹ ತಪ್ಪು ಮಾಡದಂತೆ ಎಲ್ಲ ಗ್ರಾಪಂಗಳಿಗೆ ಸೂಚಿಸಲಾಗುವುದು ಎಂದರು. ಕಾರಟಗಿ ತಾಪಂ ಇಒ ಲಕ್ಷ್ಮೀ ದೇವಿ ಯಾದವ್ ಇತರರಿದ್ದರು.