ರೈತನ ಯಶಸ್ಸಿಗೆ ‘ತಂತ್ರ, ಮಂತ್ರ, ಯಂತ್ರ’ ಸಹಕಾರಿ

ylp malenadu
Published on

ಯಲ್ಲಾಪುರ: ತಂತ್ರ, ಮಂತ್ರ ಹಾಗೂ ಯಂತ್ರ ಈ ಮೂರನ್ನು ಬಳಸಿಕೊಂಡಲ್ಲಿ ರೈತ ಯಶಸ್ವಿಯಾಗುತ್ತಾನೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ನುಡಿದರು.

ಪಟ್ಟಣದ ಎಪಿಎಂಸಿ ರೈತಭವನದಲ್ಲಿ ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ರಜತ ಮಹೋತ್ಸವವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಅಡಕೆಯೊಂದನ್ನೇ ಅವಲಂಬಿಸದೇ ಪೂರಕವಾಗಿ ವಿವಿಧ ಬೆಳೆ ಬೆಳೆಯುವ ಪ್ರಯತ್ನ ಆಗಬೇಕಿದೆ. ಇದು ರೈತರಿಗೆ ಪೂರಕವಾಗಿ, ಸಮೃದ್ಧವಾಗಿ ಬೆಳೆಯಲು ಸಹಾಯಕ. ಅದಕ್ಕೆ ಸಹಕಾರಿ ಸಂಘಗಳು ಬೆಂಬಲವಾಗಿ ನಿಲ್ಲಬೇಕು ಎಂದರು.

ಕೃಷಿಯಲ್ಲಿ ಯಾಂತ್ರೀಕರಣ ಅತ್ಯಗತ್ಯವಾಗಿದೆ. ಸಣ್ಣ ಯಂತ್ರಗಳು ಬಂದಿದ್ದು, ಯಾಂತ್ರೀಕರಣ ಸುಲಭೀಕರಣ ಆಗಿದೆ. ಸೋಲಾರ್ ಶಕ್ತಿ ಬಳಸುವ ಯಂತ್ರಗಳನ್ನು ರೈತರಿಗೆ ಕೊಡಬೇಕು ಎಂದರು.

ಸಂಘದಿಂದ ಸ್ವರ್ಣವಲ್ಲೀ ಮಠಕ್ಕೆ ಅನ್ನದಾನ ಸೇವೆಗೆ ನಿಧಿ ಸಮರ್ಪಿಸಲಾಯಿತು. ರಜತ ಮಹೋತ್ಸವದ ಅಂಗವಾಗಿ ಹೊರತಂದ ‘ರಜತ ಪಥ’ ಸ್ಮರಣ ಸಂಚಿಕೆಯನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಸಂಘದ ಸದಸ್ಯರಿಗೆ ರಜತ ಸಂಭ್ರಮದ ನೆನಪಿಗೆ ಬೆಳ್ಳಿ ನಾಣ್ಯ ವಿತರಿಸಲಾಯಿತು.

ಮಲೆನಾಡು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಕೃಷಿ ಉಪಕರಣಗಳ ಖರೀದಿಗಾಗಿ ರೈತರು ಹೊರ ಊರುಗಳನ್ನು ಆಶ್ರಯಿಸಬೇಕಿತ್ತು. ಅದನ್ನು ಮನಗಂಡು ರೈತರ ಅಗತ್ಯತೆಗೆ ತಕ್ಕಂತೆ ಕೃಷಿ ಉಪಕರಣಗಳನ್ನು ಒದಗಿಸುವ ಉದ್ದೇಶದಿಂದ ಆರಂಭವಾದ ಸಂಸ್ಥೆ ಇದೀಗ 25 ವರ್ಷಗಳನ್ನು ಪೂರೈಸಿದೆ. ರೈತರ ಸಹಕಾರದಿಂದ ಸಂಘ ಮುನ್ನಡೆಯುತ್ತಿದೆ ಎಂದರು.

ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಸಂಘದ ಉಪಾಧ್ಯಕ್ಷ ಎಂ.ಜಿ. ಭಟ್ಟ, ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಹೆಗಡೆ ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. ಡಾ.ರವಿ ಭಟ್ಟ ಬರಗದ್ದೆ, ಸಣ್ಣಪ್ಪ ಭಾಗ್ವತ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net