ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿಗೆ ಮೊರೆ

06 lxr-1
Published on

ಲಕ್ಷ್ಮೇಶ್ವರ: ಒಂದೂವರೆ ತಿಂಗಳಿಂದ ತಾಲೂಕಿನಲ್ಲಿ ಮಳೆಯಾಗದೆ ಬಹುತೇಕ ಬೆಳೆಗಳು ಒಣಗಿ ಬರಗಾಲ ಆವರಿಸಿದೆ. ಜೂನ್‌ನಲ್ಲಿ ಮಳೆಯೇ ಆಗಲಿಲ್ಲ. ಜುಲೈನಲ್ಲಾದ ಮಳೆಗೆ ಬಿತ್ತನೆ ಮಾಡಿರುವ ಬೆಳೆ ಹುಲುಸಾಗಿ ಬೆಳೆದಿರುವುದನ್ನು ಕಂಡು ರೈತರು ಸಮಾಧಾನಪಟ್ಟಿದ್ದರು. ಆದರೆ ಜುಲೈ 25ರಿಂದ ಇಲ್ಲಿಯವರೆಗೂ ಮಳೆಯೇ ಆಗದೆ ಬಿಸಿಲ ತಾಪದಿಂದ ಬೆಳೆಗಳು ಒಣಗಿ ರೈತರಲ್ಲಿ ಬದುಕಲ್ಲಿ ಬರಸಿಡಿಲು ಬಡಿದಂತಾಗಿದೆ.

ತಾಲೂಕಿನಲ್ಲಿ ಒಟ್ಟು 30,242 ಹೆಕ್ಟೇರ್(ಶೇ.84) ಬಿತ್ತನೆಯಾಗಿದೆ. ಅದರಲ್ಲಿ ಗೋವಿನ ಜೋಳ 23,200 ಹೆಕ್ಟೇರ್, 1250 ಹೆಕ್ಟೇರ್ ಪ್ರದೇಶದಲ್ಲಿ ಹೆಸರು, 3620 ಹೆಕ್ಟೇರ್‌ನಲ್ಲಿ ಶೇಂಗಾ, ಉಳ್ಳಾಗಡ್ಡಿ, ಮೆಣಸಿನಕಾಯಿ, ಹತ್ತಿ ಇನ್ನಿತರ ಬೆಳೆ ಬೆಳೆಯಲಾಗಿದೆ.

ಮಳೆರಾಯನಿಗೆ ಅಂಗಲಾಚುತ್ತಿದೆ ರೈತ ಸಮುದಾಯ: ಪ್ರಮುಖ ಮಳೆಗಳು ಈ ಬಾರಿ ಕೈಕೊಟ್ಟಿದ್ದು, ಎಲ್ಲ ಬೆಳೆಗಳೂ ಒಣಗಿವೆ. ತಾಲೂಕಿನಲ್ಲಿ ಮಸಾರಿ ಜಮೀನು ಹೊಂದಿರುವ ಲಕ್ಷ್ಮೇಶ್ವರ, ಅಕ್ಕಿಗುಂದ, ಬಟ್ಟೂರ, ಸೂಗಿವಾಳ, ಸೂರಣಗಿ, ಬಾಲೇಹೊಸೂರ, ಹರದಗಟ್ಟಿ, ಆದ್ರಳ್ಳಿ, ದೊಡ್ಡೂರ, ಯಲ್ಲಾಪುರ ಸೇರಿ ಅನೇಕ ಭಾಗದ ರೈತರು ಒಣಗಿರುವ ಬೆಳೆ ಹರಗುತ್ತಿದ್ದಾರೆ. ಕೆಲವು ರೈತರು ಮಳೆ ಬರುವವರೆಗೂ ಬೆಳೆ ಉಳಿಸಿಕೊಳ್ಳಬೇಕೆಂದು ಟ್ಯಾಂಕರ್ ಮೂಲಕ, ಚರಂಡಿ, ಹಳ್ಳ, ಇತರೇ ಮೂಲಗಳಿಂದ ನೀರು ಹಾಕುತ್ತಿದ್ದಾರೆ.

ತಾಲೂಕಿನಲ್ಲಿ ಮಳೆ ಕೊರತೆಯಿಂದ ಬೆಳೆಗಳು ಸಂಪೂರ್ಣ ಒಣಗಿವೆ. ರೈತ ಸಂಕಷ್ಟದಲ್ಲಿದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರ ಒಬ್ಬರ ಮೇಲೊಬ್ಬರು ಬೊಟ್ಟು ಮಾಡಿ ತೋರಿಸುವುದನ್ನು ಬಿಟ್ಟು ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು. ಮಾರ್ಗಸೂಚಿ ಅನ್ವಯ ಬರ ಪರಿಹಾರ ಕಲ್ಪಿಸಬೇಕು. ಬೆಳೆಹಾನಿ, ಬೆಳೆವಿಮೆ, ಪ್ರೋತ್ಸಾಹಧನ ಕಲ್ಪಿಸಬೇಕು. ಗದಗ ಜಿಲ್ಲೆಯಲ್ಲೂ ಮೋಡಬಿತ್ತನೆಗೆ ಕ್ರಮ ವಹಿಸಬೇಕು.-ಪದ್ಮರಾಜ ಪಾಟೀಲ, ರೈತ ಮುಖಂಡ ಬಿತ್ತನೆಯಾದ ಬೆಳೆಗಳು 2 ತಿಂಗಳ ಕಾಲಾವಾಧಿಯದಾಗಿದ್ದು, ಸಂಪೂರ್ಣ ಒಣಗಿವೆ. ಮಳೆಯಾದರೂ ಸುಧಾರಿಸಲಾರದಷ್ಟು ಹಾಳಾಗಿವೆ. ರ್ಮಾಸೂಚಿಯನ್ವಯ ತಾಲೂಕಿನ ಆಯ್ದ ಭಾಗದಲ್ಲಿನ ಬೆಳೆಹಾನಿ ವಿವರ, ವಸ್ತು ಸ್ಥಿತಿಯನ್ನು ಚಿತ್ರಸಹಿತ ವರದಿ ಸಲ್ಲಿಸಲಾಗಿದೆ. ಬರ, ತುರ್ತು ಪರಿಸ್ಥಿತಿ ನಿಭಾಯಿಸಲು ತಹಸೀಲ್ದಾರ್ ಖಾತೆಯಲ್ಲಿ ಅಂದಾಜು 35 ಲಕ್ಷ ರೂ. ಜಮೆಯಿದೆ. ಇಷ್ಟರಲ್ಲೇ ತಾಲೂಕು ಬರಗಾಲಪೀಡಿತ ಎಂದು ಘೋಷಣೆಯಾಗಲಿ.-ಕೆ.ಆನಂದಶೀಲ, ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net