

ರವಿ ಗೋಸಾವಿ ಬೆಳಗಾವಿ
ಸಪ್ತ ನದಿಗಳ ನಾಡು ಎಂದೇ ಹೆಸರಾಗಿರುವ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಈ ಬಾರಿ ಬರದ ಛಾಯೆ ಆವರಿಸಿದೆ. ಮುಂಗಾರು ಮಳೆ ನಿಗದಿತ ಸಮಯಕ್ಕೆ ಬಾರದಿರುವುದರಿಂದ ಜಿಲ್ಲೆಯ ರೈತರು ತಮ್ಮ ಹೊಲ ಬಿತ್ತನೆ ಮಾಡದೆ, ಮಳೆ ಜಪ ನಡಿಸಿದ್ದು, ಬೋರವೆಲ್‌ಗಳ ಅಂತರ್ಜಲವೂ ಪಾತಾಳಕ್ಕಿಳಿದಿದ್ದರಿಂದ ತೊಟಗಾರಿಕೆ ಬೆಳೆಗಳಿಗೆ ರೈತರು ಟ್ಯಾಂಕರ್‌ಗಳ ಮೂಲಕ ನಿರುಣಿಸಿ ಬೆಳೆ ರಕ್ಷಣೆಗೆ ಹರಸಾಹ ಪಡುತ್ತಿದ್ದಾರೆ.
ಜಿಲ್ಲೆಯ ಜೀವ ನದಿಗಳಾಗಿರುವ ಘಟಪ್ರಭ, ಮಲಪ್ರಭ, ಕೃಷ್ಣಾ, ವೇದಗಂಗಾ, ಧೂದಗಂಗಾ, ಹಿರಣ್ಯಕೇಶಿ ಹಾಗೂ ಮಾರ್ಕಂಡೇಯ ನದಿಗಳಲ್ಲಿ ನೀರಿನ ಮಟ್ಟ ಸಂಪೂರ್ಣವಾಗಿ ಕುಸಿದಿದೆ. ಇನ್ನೂ ಘಟಪ್ರಭಾ ಎಡದಂಡೆ ಕಾಲುವೆಯಿಂದಲೂ ನೀರು ಪೂರೈಕೆಯಾಗುತ್ತಿಲ್ಲ. ಸುತ್ತ ಮುತ್ತಲಿನ ಪ್ರದೇಶದಲ್ಲಿರುವ ಹಳ್ಳ, ಬಾಂದಾರಗಳಲ್ಲಿ ನೀರು ಇಲ್ಲದೆ ಬತ್ತುತ್ತಿದ್ದು, ಕೊಳವೆ ಬಾವಿ ಮತ್ತು ಬಾವಿಗಳಲ್ಲಿಯೂ ಅಂತರ್ಜಲ ಮಟ್ಟ ಕೂಡ ಕಡಿಮೆಯಾಗಿದ್ದರಿಂದ ನೀರು ಇಲ್ಲದೆ ಕಬ್ಬು ಒಣಗುತಿದೆ.
ಕಳೆದ ಬಾರಿ ಮೇ ಹಾಗೂ ಜೂನ್ ತಿಂಗಳಲ್ಲಿ ಸುರಿದ ಅಧಿಕ ಮಳೆಯಿಂದಾಗಿ ನೀರಿನ ಸಮಸ್ಯೆ ಉದ್ಭವಿಸಿರಲಿಲ್ಲ. ಆದರೆ, ಈ ಬಾರಿ ಜೂನ್ ತಿಂಗಳು ಅರ್ಧ ಕಳೆದರೂ ಮಳೆ ಸುಳಿಯದೇ ಇರುವುದರಿಂದ ನೀರಿನ ಕೊರತೆ ಎದುರಾಗಿದೆ. ಮಳೆಗಾಲದಲ್ಲಿ ಜಿಲ್ಲೆಯಲ್ಲಿ ನೆರೆಗೆ ಕಾರಣವಾಗುತ್ತಿದ್ದ ಮಹಾರಾಷ್ಟ್ರದಲ್ಲಿಯೂ ಈ ಬಾರಿ ಮಳೆ ಆಗಿರದ ಕಾರಣ ಕೃಷ್ಣಾ ನದಿಗೆ ಬರಬೇಕಾದ ನೀರು ಬರುತ್ತಿಲ್ಲ. ಮಹಾರಾಷ್ಟ್ರದ ಜಲಾಶಯಗಳಿಂದಲೂ ನೀರು ಬಿಡುತ್ತಿಲ್ಲ. ಇದರಿಂದಾಗಿ ಕೃಷ್ಣಾ ತೀರದ ಚಿಕ್ಕೋಡಿ ಭಾಗದ ಪ್ರದೇಶಗಳ ಜನ ಮತ್ತು ಜಾನುವಾರುಗಳಿಗೆ ನೀರಿನ ಅಭಾವ ಎದುರಾಗಿದೆ.
ಇನ್ನು ಘಟಪ್ರಭ ಹಾಗೂ ಮಲಪ್ರಭ ನದಿಗಳ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದ್ದು, ಕಳೇದ ವರ್ಷ ಜೂ.18ಕ್ಕೆ ಘಟಪ್ರಭ ಹಿಡಕಲ್ ಜಲಾಶಯದಲ್ಲಿ 2096.00 ಅಡಿಗಳಷ್ಟಿದ್ದ ನೀರು ಇದೀಗ 2077.93ಕ್ಕೆ ಕುಸಿದಿದೆ. ಮಲಪ್ರಭ ಜಲಾಶಯದಲ್ಲಿಯೂ ನೀರಿನ ಮಟ್ಟ ಗಣನೀಯವಾಗಿ ಕಡಿಮೆಯಾಗಿದ್ದು, ಕಳೆದ ವರ್ಷ 2053.00 ಅಡಿಗಳಷ್ಟಿದ್ದ ನೀರು ಈ ಬಾರಿ 2044.48ಕ್ಕೆ ಇಳಿದಿದೆ.
ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಆಗಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿಯೂ ಕೊಳವೆಬಾವಿ, ಜಲಾಶಯಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಮುಂಗಾರು ಮಳೆ ಇನ್ನೂ 15 ದಿನ ವಿಳಂಬವಾದಲ್ಲಿ ಕುಡಿಯುವ ನೀರಿಗೂ ಅಭಾವ ಸೃಷ್ಟಿಯಾಗಬಹುದು ಎನ್ನುವುದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹೇಳುತ್ತಿದ್ದಾರೆ.
ಆದರೆ, ಅಸಲಿಗೆ ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಇದೇ ಸ್ಥಿತಿ ಮುಂದುವರಿದರೆ, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಆತಂಕ ಕಾಡುತ್ತಿದ್ದು, ಬೆಳಗಾವಿ ತಾಲೂಕಿನ ರಕ್ಕಸಕೊಪ್ಪ ಜಲಾಶಯದ ನೀರನ್ನು ಬೆಳಗಾವಿ ಮಹಾನಗರಕ್ಕೆ ನೀರು ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಲಾಗುತ್ತಿದೆ. ಕೃಷಿ ಚಟುವಟಿಕೆಗಳಿಗೆ ನೀರು ಪೂರೈಕೆ ಸಂಪೂರ್ಣ ಸ್ಥಗಿತವಾಗಿದ್ದು, ಮಿತ ಬಳಕೆ ಮಾಡುವಂತೆ ಈಗಾಗಲೇ ಪಾಲಿಕೆ ಹಾಗೂ ನೀರು ಸರಬರಾಜು ಮಾಡುತ್ತಿರುವ ಎಲ್‌ಎನ್‌ಟಿ ಕಂಪನಿ ಸಾರ್ವಜನಿಕರಿಗೆ ಮನವಿ ಮಾಡಿರುವುದು ನೀರಿನ ಅಭಾಯ ತಲೆದೋರಿರುವುದನ್ನು ಸಾಕ್ಷೀಕರಿಸುತ್ತಿದೆ. ಅಲ್ಲದೇ, ಕುಡಿಯುವ ನೀರು ಪೂರೈಸುವ ನೀರಿನ ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ.
-----