ತಂದ್ರೆಗೂಡಿ ಕೊಪ್ಪಲು-ಚಿಕ್ಕೆಗೌಡನಕೊಪ್ಪಲು ರಸ್ತೆ ಸ್ಥಿತಿ ಹೇಳತೀರದು

ಬೆಟ್ಟದಪುರ ಸಮೀಪದ ತಂದ್ರೆಗೂಡಿ ಕೊಪ್ಪಲು ಗ್ರಾಮದಿಂದ ಚಿಕ್ಕೆಗೌಡನಕೊಪ್ಪಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿರುವುದು.
ಬೆಟ್ಟದಪುರ ಸಮೀಪದ ತಂದ್ರೆಗೂಡಿ ಕೊಪ್ಪಲು ಗ್ರಾಮದಿಂದ ಚಿಕ್ಕೆಗೌಡನಕೊಪ್ಪಲಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿರುವುದು.
Published on

 ಬೆಟ್ಟದಪುರ: ಸಮೀಪದ ತಂದ್ರೆಗೂಡಿ ಕೊಪ್ಪಲು ಗ್ರಾಮದಿಂದ ಚಿಕ್ಕೆಗೌಡನಕೊಪ್ಪಲಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿದೆ.

ತಂದ್ರೆಗೂಡಿ ಕೊಪ್ಪಲು ಗ್ರಾಮದಿಂದ ಚಿಕ್ಕೆಗೌಡನ ಕೊಪ್ಪಲು ಹಾಗೂ ಕಗ್ಗಲಿಕೊಪ್ಪಲು ಮಾರ್ಗವಾಗಿ ರಾವಂದೂರು ಸೇರಿದಂತೆ ಪಟ್ಟಣ ಪ್ರದೇಶಗಳಿಗೆ ಈ ರಸ್ತೆ ಕೊಂಡಿಯಾಗಿದೆ. ಅಲ್ಲದೆ ಈ ಭಾಗದ ಜನರು ಆಸ್ಪತ್ರೆ, ಶಾಲಾ-ಕಾಲೇಜು, ವ್ಯಾಪಾರ ವಹಿವಾಟು ಸೇರಿದಂತೆ ಇತರ ಚಟುವಟಿಕೆಗಳಿಗೆ ನಿತ್ಯ ಓಡಾಡಲು ಈ ರಸ್ತೆಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಸುಮಾರು ಎರಡರಿಂದ ಮೂರು ಕಿಮೀ ಉದ್ದವಿರುವ ರಸ್ತೆಯಲ್ಲಿ ಬೃಹತ್ ಗುಂಡಿಗಳು ಬಾಯ್ತೆರೆದಿದ್ದು, ರಸ್ತೆಯಲ್ಲಿ ಸಂಚರಿಸುವ ಸವಾರರು ಹರಸಾಹಸ ಪಟ್ಟು ವಾಹನ ಚಲಾಯಿಸಬೇಕಾಗಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಕಟ್ಟಿಟ್ಟ ಬುತ್ತಿ.

ಕೃಷಿ ಚಟುವಟಿಕೆಗಳಿಗೆ ಸಮಸ್ಯೆ: ಈ ವ್ಯಾಪ್ತಿಯು ಸಂಪೂರ್ಣ ಕೃಷಿ ಚಟುವಟಿಕೆ ಪ್ರದೇಶವಾಗಿದ್ದು, ಪ್ರಮುಖ ವಾಣಿಜ್ಯ ಬೆಳೆಗಳಾದ ತಂಬಾಕು ಹಾಗೂ ಶುಂಠಿಯನ್ನು ಇಲ್ಲಿನ ರೈತರು ಬೆಳೆಯುತ್ತಾರೆ. ಮುರಿದ ತಂಬಾಕು ಎಲೆಗಳನ್ನು ರೈತರು ಟ್ರಾೃಕ್ಟರ್, ಎತ್ತಿನಗಾಡಿ ಸೇರಿದಂತೆ ಇತರ ವಾಹನಗಳಲ್ಲಿ ಬ್ಯಾರನ್‌ಗೆ ಕೊಂಡೊಯ್ಯಲು, ಅದೇ ರೀತಿ ಹದಮಾಡಿದ ತಂಬಾಕು ಬೇಲ್ಗಳನ್ನು ಹರಾಜು ಮಾರುಕಟ್ಟೆಗೆ ಕೊಂಡೊಯ್ಯಲು ಹೆಚ್ಚಾಗಿ ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಆದರೆ ರಸ್ತೆಯಲ್ಲಿ ಗುಂಡಿಗಳು ಉಂಟಾಗಿರುವ ಪರಿಣಾಮ ಓಡಾಡಲು ಸಾಕಷ್ಟು ಸಮಸ್ಯೆ ಉಂಟಾಗಿರುವುದರ ಜತೆಗೆ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ತೊಡಕು ಎದುರಾಗುತ್ತಿದೆ. ಕೂಡಲೇ ಗುಂಡಿ ಬಿದ್ದಿರುವ ರಸ್ತೆಯನ್ನು ದುರಸ್ತಿ ಪಡಿಸಬೇಕು ಎಂಬುದು ಸ್ಥಳೀಯರು ಹಾಗೂ ವಾಹನ ಸವಾರರ ಪ್ರಮುಖ ಬೇಡಿಕೆ.

ಮಳೆಗಾಲದಲ್ಲಿ ಕೆಸರು ಗದ್ದೆ: ಈ ಮಾರ್ಗವನ್ನು ಹಲವು ವರ್ಷಗಳಿಂದ ಅಭಿವೃದ್ಧಿ ಪಡಿಸದ ಪರಿಣಾಮ ಸಂಪೂರ್ಣವಾಗಿ ಹದಗೆಟ್ಟಿದೆ. ವಾಹನ ಸವಾರರು ಹಾಗೂ ಪಾದಚಾರಿಗಳು ರಸ್ತೆಯಲ್ಲಿ ಓಡಾಡುವ ಸಂದರ್ಭ ಬೇಸಿಗೆ ಕಾಲದಲ್ಲಿ ಧೂಳಿನ ಸಮಸ್ಯೆ ಎದುರಿಸಿದರೆ, ಮಳೆಗಾಲದಲ್ಲಿ ಕೆಸರಿನ ಸ್ನಾನವಾಗುತ್ತದೆ. ಮಳೆ ಬಂತೆಂದರೆ ಈ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗುತ್ತದೆ. ಅದರಲ್ಲೂ ಬೈಕ್ ಸವಾರರು ಸಂಚರಿಸಲು ಸರ್ಕಸ್ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸ್ವಲ್ಪ ಆಯತಪ್ಪಿದರೂ ಅಪಾಯ ಇಲ್ಲಿ ಕಾದಿದ್ದು, ಪರಿಣಾಮ ಜನರು ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.

ಆರು ತಿಂಗಳ ಹಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆಯಾದರೂ ಕಾಮಗಾರಿ ಮಾತ್ರ ಈವರೆಗೂ ಆರಂಭಗೊಂಡಿಲ್ಲ. ಇದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಸದ್ಯ ಸ್ಥಳೀಯ ಅತ್ತಿಗೋಡು ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆಯಡಿ ತಂದ್ರೆಗುಡಿ ಕೊಪ್ಪಲು ವ್ಯಾಪ್ತಿಯಲ್ಲಿ ಈಗಾಗಲೇ ಚರಂಡಿ ನಿರ್ಮಾಣವಾಗಿದೆ. ರಸ್ತೆ ನಿರ್ಮಾಣದ ಜವಾಬ್ದಾರಿ ತೆಗೆದುಕೊಂಡಿರುವ ಹುಣಸೂರಿನ ಕೆಆರ್‌ಐಡಿಎಲ್ ಕಾಮಗಾರಿ ಆರಂಭಿಸಬೇಕಿದೆ.

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ವಿದ್ಯುತ್ ಕಂಬ: ಇನ್ನು ರಸ್ತೆಯ ಎರಡೂ ಬದಿಯಲ್ಲಿ ಆಳೆತ್ತರಕ್ಕೆ ಗಿಡಗಂಟಿಗಳು ಬೆಳೆದು ನಿಂತಿದ್ದು, ಇದರಿಂದ ಪಾದಚಾರಿಗಳಿಗೆ ಸಮಸ್ಯೆ ಉಂಟಾಗುತ್ತಿದ್ದರೆ. ಮತ್ತೊಂದು ಕಡೆ ರಸ್ತೆ ಬದಿಯಲ್ಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಪೆಟ್ಟಿಗೆ ಹಾಗೂ ಕಂಬಗಳ ಸುತ್ತ ಆಳೆತ್ತರಕ್ಕೆ ಗಿಡ ಗಂಟಿಗಳು ಬೆಳೆದು ನಿಂತು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಇದರಿಂದಾಗಿ ಜಮೀನುಗಳಿಗೆ ಕೃಷಿಕರು ತೆರಳಲು ಸಾಧ್ಯವಾಗದಿರುವುದರ ಜತೆಗೆ ಜನರು ಓಡಾಡಲು ಭಯಪಡುವಂತಾಗಿದೆ.

ಅವಘಡ ಸಂಭವಿಸುವ ಮುನ್ನ ಇನ್ನಾದರೂ ಇತ್ತ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಿ ರಸ್ತೆ ಅಭಿವೃದ್ಧಿಗೆ ಆದ್ಯತೆ ನೀಡುವಂತಾಗಬೇಕು. ಅಲ್ಲದೆ ವಿದ್ಯುತ್ ಕಂಬಗಳ ಸುತ್ತ ಆವರಿಸಿಕೊಂಡಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ಸಾರ್ವಜನಿಕರು ಹಾಗೂ ಸ್ಥಳೀಯರಿಗೆ ಓಡಾಡಲು ಸಮಸ್ಯೆ ಆಗದಂತೆ ಕ್ರಮವಹಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ತಂದ್ರೆಗೂಡಿ ಕೊಪ್ಪಲು ಗ್ರಾಮದಿಂದ ಚಿಕ್ಕೆಗೌಡನಕೊಪ್ಪಲು ಮಾರ್ಗದಲ್ಲಿ ಸುಮಾರು 400 ಮೀ.ನಷ್ಟು ಕಾಂಕ್ರೀಟ್ ರಸ್ತೆ ಮಾಡಲು ಈಗಾಗಲೇ ಯೋಜನೆಗೆ ಅನುಮೋದನೆ ದೊರೆತಿದ್ದು, ಗುತ್ತಿಗೆದಾರರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ಒಂದು ತಿಂಗಳೊಳಗಾಗಿ ಕಾಮಗಾರಿ ಆರಂಭವಾಗಲಿದ್ದು, ಆ ಮೂಲಕ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.

ವಿಜಯ್ ಸಹಾಯಕ ಇಂಜಿನಿಯರ್, ಕೆ.ಆರ್.ಐ.ಡಿ.ಎಲ್, ಹುಣಸೂರು

ತಂದ್ರೆಗುಡಿಕೊಪ್ಪಲು ಗ್ರಾಮದಿಂದ ಚಿಕ್ಕೆಗೌಡನ ಕೊಪ್ಪಲು ಹಾಗೂ ಕಗ್ಗಲಿಕೊಪ್ಪಲಿಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಆಸ್ಪತ್ರೆ, ಕೂಲಿ ಕೆಲಸ, ಕೃಷಿ ಚಟುವಟಿಕೆ, ವ್ಯಾಪಾರ ಸೇರಿದಂತೆ ಇತರ ಚಟುವಟಿಕೆಗಳಿಗೆ ಇಲ್ಲಿನ ಜನರು ಈ ರಸ್ತೆಯನ್ನು ಹೆಚ್ಚು ಅವಲಂಬಿಸಿದ್ದಾರೆ. ಅಲ್ಲದೆ ಪ್ರತಿನಿತ್ಯ ಹೆಚ್ಚು ವಾಹನಗಳು ಇಲ್ಲಿ ಸಂಚಾರ ಮಾಡುತ್ತವೆ. ಹಲವು ವರ್ಷದಿಂದ ಈ ರಸ್ತೆಯ ಅಭಿವೃದ್ಧಿ ಕಾರ್ಯ ನನೆಗುದಿಗೆ ಬಿದ್ದಿದ್ದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಿ ಕೂಡಲೇ ಕೆಲಸ ಆರಂಭ ಮಾಡಬೇಕಿದೆ.

ಟಿ.ಆರ್.ರಂಗನಾಥ್ ತಂದ್ರೆಗೂಡಿ ಕೊಪ್ಪಲು ನಿವಾಸಿ

ತಂದ್ರೆಗೂಡಿಕೊಪ್ಪಲು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಈಗಾಗಲೇ ಸೂಕ್ತ ಚರಂಡಿ ವ್ಯವಸ್ಥೆ ಮಾಡಲಾಗಿದೆ. ಗ್ರಾಮದ ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಮನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಅತ್ತಿಗೋಡು ಗ್ರಾಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net