ತಾಂಡಾ ಅಭಿವೃದ್ಧಿ ನಿಗಮದ ಅನುದಾನ ಕಡಿತ

1-DVD-2 (Ramesh)
ರಮೇಶ
Published on

ದೇವದುರ್ಗ: ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಕ್ಕೆ ರಾಜ್ಯ ಸರ್ಕಾರ ಅನುದಾನ ನೀಡದೆ ಅನ್ಯಾಯ ಮಾಡುತ್ತಿದೆ. ಆದ್ದರಿಂದ ರಾಜ್ಯಮಟ್ಟದಲ್ಲಿ ಹೋರಾಟ ಮಾಡಲು ಚಿಂತನೆ ನಡೆಸಲಾಗುವುದು ಎಂದು ಗೋರ ಸೇನಾ ರಾಷ್ಟ್ರೀಯ ಸಂಘಟನೆ ಜಿಲ್ಲಾಧ್ಯಕ್ಷ ರಮೇಶ ರಾಠೋಡ್ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2009ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಲಂಬಾಣಿ ಸಮಾಜದ ಜನರಿಗೆ ಹಲವು ಯೋಜನೆಗಳನ್ನು ಜಾರಿ ಮಾಡಿದ್ದರು.

ಗಂಗಾ ಕಲ್ಯಾಣ, ಕಿರು ಸಾಲ ಸೌಲಭ್ಯ, ವಿವಿಧ ಯೋಜನೆಗೆ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಇದರಿಂದ ಹಲವು ತಾಂಡಾಗಳ ಜನರು ಯೋಜನೆ ಲಾಭಪಡೆದು ಉತ್ತಮ ಜೀವನ ನಡೆಸುತ್ತಿದ್ದರು. ಆದರೆ, ಕಳೆದ ಮೂರು ವರ್ಷಗಳಿಂದ ರಾಜ್ಯ ಸರ್ಕಾರ ನಿಗಮಕ್ಕೆ ಅನುದಾನವೇ ನೀಡುತ್ತಿಲ್ಲ ಎಂದು ದೂರಿದರು.

ರಾಜ್ಯದಲ್ಲಿ 3500 ತಾಂಡಾಗಳಿದ್ದು, 30 ಲಕ್ಷ ಜನಸಂಖ್ಯೆಯಿದೆ. ಶೇ.90 ತಾಂಡಾಗಳು ಉತ್ತರ ಕರ್ನಾಟಕದಲ್ಲಿವೆ. ಆದರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಿಗಮಕ್ಕೆ ಅನುದಾನವೇ ಬಿಡುಗಡೆ ಮಾಡಿಲ್ಲ.

ಇದರಿಂದ ಗಂಗಾ ಕಲ್ಯಾಣ, ಕಿರುಸಾಲ, ಮಹಿಳೆಯರಿಗೆ ವೈಯಕ್ತಿಕ ಉದ್ಯೋಗ ಸಾಲ ಪಡೆಯಲು ಸಮಸ್ಯೆಯಾಗಿದೆ. ಆದರೆ, ಬೇರೆ ಅಭಿವೃದ್ಧಿ ಮಂಡಳಿಗೆ ಅನುದಾನ ನೀಡಲಾಗುತ್ತಿದೆ. ತಾಂಡಾ ಅಭಿವೃದ್ಧಿ ಮಂಡಳಿಗೆ ಅನುದಾನ ನೀಡದೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಅಭಿವೃದ್ಧಿ ಮಂಡಳಿಗೆ ಅನುದಾನ ನೀಡುವಂತೆ ಸಮಾಜದ ಶಾಸಕರ ಜತೆ ಪಕ್ಷಾತೀತವಾಗಿ ಸಿಎಂ ಸಿದ್ದರಾಮಯ್ಯಗೆ ಭೇಟಿಮಾಡಿ ಮನವಿ ಮಾಡಲಾಗುವುದು. ಸರ್ಕಾರ ಮಂಡಳಿಗೆ ತಕ್ಷಣವೇ ಅನುದಾನ ನೀಡಬೇಕು. ಇದೇ ಪರಿಸ್ಥಿತಿ ಮುಂದುವರಿದರೆ ರಾಜ್ಯಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ತಾಲೂಕು ಅಧ್ಯಕ್ಷ ಬೂದೆಪ್ಪ ರಾಠೋಡ್, ಪ್ರಮುಖರಾದ ನರೇಶ ಜಾಧವ್, ರಮೇಶ ರಾಠೋಡ್, ಹೇಮಣ್ಣ, ಗೋವಿಂದ, ಹನುಮಂತ ರಾಠೋಡ್, ಕೋನಪ್ಪ, ಭೀಮಣ್ಣ, ಪಂಪಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net