

ಕನಕಗಿರಿ: ಪಟ್ಟಣದ ಐತಿಹಾಸಿಕ ಕನಕಾಚಲಪತಿ ರಥೋತ್ಸವಕ್ಕೆ ಸೋಮವಾರ ಆಗಮಿಸಿದ್ದ ಭಕ್ತಾದಿಗಳಿಗೆ ತಾಲೂಕು ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಮೂಡಿಸಲಾಯಿತು.
ತಾಪಂ ಸಹಾಯಕ ನಿರ್ದೇಶಕ (ಗ್ರಾ.ಉ) ಚಂದ್ರಶೇಖರ ಬಿ. ಕಂದಕೂರ ಮಾತನಾಡಿ, ಚುನಾವಣೆ ದಿನದಂದು ಸಮಯ ವ್ಯರ್ಥ ಮಾಡದೇ ಆಯೋಗ ನಿಗದಿಪಡಿಸಿದ ದಾಖಲಾತಿಯೊಂದಿಗೆ ಮತಗಟ್ಟೆಗೆ ತೆರಳಿ ಸೂಕ್ತ ಎನಿಸುವ ಅಭ್ಯರ್ಥಿಗೆ ಮತ ಹಾಕಬೇಕು. ಪ್ರತಿ ಕುಟುಂಬದಲ್ಲಿರುವ 18 ವರ್ಷ ಮೇಲ್ಪಟ್ಟ ಸದಸ್ಯರು ತಾತ್ಸರ ಮಾಡದೇ ಹಕ್ಕು ಚಲಾಯಿಸಿ ಇತರರಿಗೆ ಪ್ರೇರಣೆ ನೀಡಬೇಕು ಎಂದರು.
ಪ್ರತಿ ಮತ ದೇಶಕ್ಕೆ ಹಿತ ಎನ್ನುವಂತೆ ಮತದಾನದಿಂದ ದೂರ ಉಳಿಯಬಾರದು. ಒಂದೊಂದು ಮತವೂ ನಿರ್ಣಾಯಕವಾಗಿದ್ದು, ಯಾವುದೇ ರೀತಿಯ ಆಸೆ, ಆಮಿಷಗಳಿಗೆ ಒಳಗಾಗದೆ ನಿರ್ಭಯವಾಗಿ ಮತ ಚಲಾಯಿಸಿ ಎಂದು ತಿಳಿಸಿದರು.
ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ತಾಲೂಕು ಸ್ವೀಪ್ ಸಮಿತಿ ಸದಸ್ಯರಾದ ವೆಂಕೋಬ, ಕೆ. ಶಿವಕುಮಾರ್, ಪ್ರಕಾಶ ಹಾಗೂ ಪಪಂ ಸಿಬ್ಬಂದಿ ಇದ್ದರು.