ಮೀಸಲಾತಿ ಉಳಿಸಲು ತಮಿಳುನಾಡು ಮಾದರಿ ಅಗತ್ಯ : ವಿ.ಎಸ್. ಉಗ್ರಪ್ಪ

ವಿ.ಎಸ್. ಉಗ್ರಪ್ಪ
ವಿ.ಎಸ್. ಉಗ್ರಪ್ಪ
Published on: 

ಮೈಸೂರು: ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದ್ದನ್ನು ರದ್ದು ಪಡಿಸಿ ಹೈಕೋರ್ಟ್ ನೀಡಿರುವ ಆದೇಶದಿಂದ ಎಸ್‌ಸಿ, ಎಸ್‌ಟಿ ಹಾಗೂ ಓಬಿಸಿ ಸಮುದಾಯಕ್ಕೆ ಸಮಸ್ಯೆ ಉಂಟಾಗಲಿದೆ. ಮೀಸಲಾತಿ ಉಳಿಸಲು ತಮಿಳುನಾಡಿನ ಮಾದರಿ ಅನುಸರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.

ತಮಿಳುನಾಡಿನಲ್ಲಿ ಮೀಸಲಾತಿ ಪ್ರಮಾಣವನ್ನು ಶೇ.50ರ ಮಿತಿಗೆ ಒಳಪಡಿಸದಂತೆ ರಕ್ಷಿಸುವ ಉದ್ದೇಶದಿಂದ ಅಂದಿನ ಸರ್ಕಾರವು ತಮಿಳುನಾಡು ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಕಾಯ್ದೆ- 1993ಅನ್ನು ಅಂಗೀಕರಿಸಿತು. ಈ ಕಾಯ್ದೆಯ ಮೂಲಕ ರಾಜ್ಯದಲ್ಲಿ ಜಾರಿಯಲ್ಲಿದ್ದ ಮೀಸಲಾತಿ ವ್ಯವಸ್ಥೆಗೆ ಕಾನೂನುಬದ್ಧ ರಕ್ಷಣೆ ಒದಗಿಸುವ ಪ್ರಯತ್ನ ಮಾಡಲಾಯಿತು. ನಂತರ ಅಂದಿನ ಮುಖ್ಯಮಂತ್ರಿ ಜೆ. ಜಯಲಲಿತಾ ನೇತೃತ್ವದ ತಮಿಳುನಾಡು ಸರ್ಕಾರವು ಮೀಸಲಾತಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿತು. ಇದರ ಪರಿಣಾಮವಾಗಿ 1994ರಲ್ಲಿ ಸಂವಿಧಾನ ತಿದ್ದುಪಡಿ ಮಾಡಿ ತಮಿಳುನಾಡಿನ ಮೀಸಲಾತಿ ಕಾಯ್ದೆಯನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲಾಯಿತು. ಇದೇ ಮಾದರಿಯನ್ನು ನಮ್ಮ ರಾಜ್ಯದ ಮೀಸಲಾತಿಗೂ ಅನುಸರಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ರಾಜ್ಯದ ಮೀಸಲಾತಿಯನ್ನು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ಸರ್ಕಾರದ ಮೇಲೆ ಒತ್ತಡ ಹೇರಲು ಸರ್ವಪಕ್ಷಗಳ ನಿಯೋಗ ಹೋಗಬೇಕು. ಈಗಾಗಲೇ ಹೆಚ್ಚಳ ಮಾಡಿದ ಮೀಸಲಾತಿ ಪ್ರಯೋಜನ ಪಡೆದು ಉದ್ಯೋಗ, ಶಿಕ್ಷಣ್ಕೆ ಸೇರಿರುವವರಿಗೆ ಮುಂದೆ ಸಮಸ್ಯೆ ಆಗುವುದನ್ನು ತಪ್ಪಿಸಬೇಕು ಎಂದರು.

ಹೈಕೋರ್ಟ್ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ತರುವುದು ಶಾಶ್ವತ ಪರಿಹಾರವಲ್ಲ. ಬದಲಾಗಿ ಸಂವಿಧಾನದ 9ನೇ ಪರಿಚ್ಛೇದಕ್ಕೆ ವಿಧಿಗೆ ಸೇರಿಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಬಹುದು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಈ ಕುರಿತ ಸುದ್ದಿಗಾರರ ಪ್ರಶ್ನೆಗೆ ಸಂಸ್ಕೃತಿ ಮರೆತವರಂತೆ ಉತ್ತರಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಇಲ್ಲದಿದ್ದರೆ ಇವರು ದೊಡ್ಡ ಶೂನ್ಯ ಎಂಬುದನ್ನು ಮರೆತಿದ್ದಾರೆ. ಇದೇ ವೇಳೆ ವಿಧಾನಸಭೆ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಸಹಾ ತೀರಾ ಕೀಳು ಮಟ್ಟದಲ್ಲಿ ಮಾತನಾಡಿರುವುದು ಸರಿಯಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸತೀಶ್‌ಕುಮಾರ್, ಪ್ರಸಾದ್, ನಾಗರಾಜು, ಸಿದ್ದರಾಜು, ಚಂದನ್‌ಗೌಡ, ಮೋಹ್ಸಿನ್ ಖಾನ್ ಇದ್ದರು.