

ಜೂನ್, ಜುಲೈ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಆಗಿಲ್ಲ. ಹೀಗಾಗಿ ಈ ತಿಂಗಳಲ್ಲಿ ತಮಿಳುನಾಡಿಗೆ ಹರಿಸಬೇಕಿರುವ ನೀರು ಕೊಡಲು ಸಾಧ್ಯವಿಲ್ಲ ಎಂದು ಕಾವೇರಿ ನ್ಯಾಯ ಮಂಡಳಿ ಮುಂದೆ ರಾಜ್ಯ ಸರ್ಕಾರ ನಿರೀಕ್ಷಣಾ ಅರ್ಜಿ ಹಾಕಲಿ ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಕೊರತೆ ಆಗಿರುವುದರಿಂದ ಜಲಾಶಯಗಳಲ್ಲಿ ನೀರಿಲ್ಲ. ಹೀಗಾಗಿ ತಮಿಳುನಾಡಿಗೆ ನೀರು ಹರಿಸಲು ಆಗುವುದಿಲ್ಲ. ತಮಿಳುನಾಡು ಕ್ಯಾತೆ ತೆಗೆದ ಮೇಲೆ ರಾಜ್ಯ ಸರ್ಕಾರ ಗಲಾಟೆ ಮಾಡುವುದು ಬೇಡ. ಈಗಲೇ ನೀರು ಕೊಡಲು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿ. ಜನ ನಿಮಗೆ ಪೂರ್ಣ ಬಹುಮತ ಕೊಟ್ಟಿದ್ದಾರೆ. ಇನ್ನು ಐದು ವರ್ಷ ನಿಮ್ಮದೇ ರಾಜ್ಯಭಾರ. ಎಲ್ಲದರಲ್ಲೂ ರಾಜಕೀಯ ಮಾಡಬೇಡಿ ಎಂದರು.
ರೇಸಿಂಗ್ ಟ್ರಾೃಕ್ ಅಲ್ಲ: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಕಾರಿನ ಸ್ಪೀಡ್ ಲಿಮಿಟ್ ನೋಡಿಕೊಂಡು ಚಾಲನೆ ಮಾಡಬೇಕು. ಇದು ಹೆದ್ದಾರಿ, ರೇಸಿಂಗ್ ಟ್ರ್ಯಾಕ್ ಅಲ್ಲ. ರೋಡ್ ಚೆನ್ನಾಗಿದೆ ಎಂದು ರೇಸ್ ಮಾಡಬೇಡಿ. ಓವರ್ ಸ್ಪೀಡ್‌ನಿಂದ ಅಪಘಾತಗಳು ಸಂಭವಿಸುತ್ತಿವೆಯೇ ಹೊರತು, ರಸ್ತೆಯಿಂದಲ್ಲ. ಕಿಯಾ, ನಿಸ್ಸಾನ್ ಕಾರುಗಳಲ್ಲಿ ಕೇವಲ ಪ್ಲಾಸ್ಟಿಕ್ ಇದೆ. ವೇಗವಾಗಿ ಹೋದರೆ ಆಕ್ಸಿಡೆಂಟ್ ಆಗದೆ ಇರುತ್ತಾ? ಗೂಡ್ಸ್ ಗಾಡಿಯವರು ಸೈಡ್‌ನಲ್ಲಿ ಹೋಗಬೇಕು. ಆದರೆ, ಮಧ್ಯ ರೋಡ್‌ನಲ್ಲಿ ಹೋಗುತ್ತಿದ್ದಾರೆ. ಹಿಂದಿನ ಗಾಡಿ ಬಂದು ಹೊಡೆದರೆ ಉಳಿಯುತ್ತಾರಾ? ರಸ್ತೆ ವಿಭಜಕ ಎತ್ತರಿಸುವುದು, ಸ್ಪೀಡ್ ಲಿಮಿಟ್, ಆಂಬುಲೆನ್ಸ್ ಸೇವೆ ಎಲ್ಲವನ್ನೂ 6 ತಿಂಗಳ ಒಳಗೆ ಮಾಡುತ್ತೇವೆ. ಅಲ್ಲಿವರೆಗೂ ನಮಗೆ ಸಹಕಾರ ಕೊಡಿ ಎಂದರು.