

ಮಂಡ್ಯ: ತಂಬೂರಿ ಜವರಯ್ಯ ಅವರ ಕಾಲಘಟ್ಟದಲ್ಲಿ ಮಂಡ್ಯ ಹಾಗೂ ನೆರೆಹೊರೆಯ ನಗರದಲ್ಲಿ ಜಾನಪದ ಮತ್ತು ತತ್ವಪದ ಶ್ರೀಮಂತವಾಗಿತ್ತು. ಇದೀಗ ಅದರ ಬೇರು ಕಳಚಿಕೊಂಡಿದೆ. ಆದ್ದರಿಂದ ಇಂದಿನ ಯುವಕರು ಜಾನಪದ ಕಲೆ ಉಳಿಸಿ ತತ್ವಪದಗಳನ್ನು ಮೈಗಪ್ಪಿಕೊಳ್ಳಬೇಕು ಎಂದು ಪ್ರಗತಿಪರ ಚಿಂತಕ ಡಾ.ಎನ್.ಜಗದೀಶ್ ಕೊಪ್ಪ ಸಲಹೆ ನೀಡಿದರು.
ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿ, ಕೀಲಾರ ಕ್ಷೀರಸಾಗರ ಮೀತ್ರಕೂಟ ಹಾಗೂ ಮಹಿಳಾ ಸರ್ಕಾರಿ ಕಾಲೇಜು ಸಹಯೋಗದಲ್ಲಿ ದಿವಂಗತ ತಂಬೂರಿ ಜವರಯ್ಯ ಸ್ಮರಣಾರ್ಥ ಗುರುವಾರ ಆಯೋಜಿಸಿದ್ದ ತತ್ವಪದ ಗಾಯನ, ವಿಚಾರ ಸಂಕಿರಣ ಹಾಗೂ ಸಂವಾದ ಉದ್ಘಾಟಿಸಿ ಮಾತನಾಡಿದರು.
ತಂಬೂರಿ ಜವರಯ್ಯ ಜಾನಪದ, ತತ್ವಪದ ಗಾಯಕರಾಗಿ ಚಿರಪರಿಚಿತರಾದವರು. ಅದರಿಂದಲೇ ಅವರ ಬದುಕು ಸುಧಾರಿಸಿತ್ತು. ತತ್ವಪದದ ಇತಿಹಾಸ ಬಹು ದೊಡ್ಡದಿದೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಇದರ ಮಹತ್ವದ ಹೆಜ್ಜೆ ಇದೆ. ತತ್ವಪದ ಮೊದಲು ವಚನಕಾರರಿಂದ ಹುಟ್ಟಿದ್ದು. ಸೂಫಿ ಸಂತರು ಭಾರತಕ್ಕೆ ಬಂದಾಗ ತತ್ವಪದ ಹಾಗೂ ಜಾನಪದ ಜನಮನ್ನಣೆ ಗಳಿಸಿದವು ಎಂದು ಹೇಳಿದರು.
ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಯಾಂತ್ರಿಕ ಬದುಕು ಕಟ್ಟಿಕೊಂಡಿರುವ ಮನುಷ್ಯ ತಂತ್ರಜ್ಞಾನದ ಜತೆಗೂಡಿ ತತ್ವಪದ, ಜಾನಪದಗಳಂತಹ ದೇಸಿ ಕಲೆಯನ್ನು ಮರೆಸುತ್ತಿದೆ. ತತ್ವಪದವೂ ಮನುಷ್ಯನಿಗೆ ಗಾಢವಾದ ಅನುಭೂತಿ ನೀಡುತ್ತದೆ. ಮಾತ್ರವಲ್ಲದೆ ಕನ್ನಡದ ಅಭಿಮಾನದ ಕಣ್ಣನ್ನು ತೆರಸುತ್ತದೆ. ತಂಬೂರಿ ಜವರಯ್ಯ ಅವರಲ್ಲಿ ಕನ್ನಡ ಭಾಷಾಭಿಮಾನವಿತ್ತು. ಸರಳವಾಗಿ ತತ್ವಪದಗಳನ್ನು ಹಾಡಿ ಜನಕ್ಕೆ ಪರಿಚಯವಾದರು ಎಂದರು.
ತಂಬೂರಿ ಜವರಯ್ಯ ಬಡತನದಿಂದ ಬಂದು ಭಿಕ್ಷೆ ಬೇಡಿ ಊರೂರು ಸುತ್ತಿ ಜಾನಪದ, ತತ್ವಪದಗಳನ್ನು ಹಾಡುತ್ತ ಜೀವನ ಕಟ್ಟಿಕೊಂಡವರು. ಇಂದಿನ ವಿದ್ಯಾರ್ಥಿಗಳಿಗೆ ಹಾಗೂ ಸಾಹಿತ್ಯದಲ್ಲಿ ಅಭಿರುಚಿ ಇರುವವರಿಗೆ ಜಾನಪದ ಹಾಗೂ ತತ್ವಪದದ ಪರಿಚಯವಿರಬೇಕು. ಸಿನಿಮಾ ವೀಕ್ಷಿಸಿದಾಗ ನಾವು ಅದರಲ್ಲಿ ಮೈಮರೆಯುತ್ತೇವೆ. ಹಾಗೆಯೇ ತತ್ವಪದದ ಒಳಗೆ ಹೋಗಿ ಬಂದಾಗ ನಮ್ಮಲ್ಲಿ ಅನೇಕ ಬದಲಾವಣೆಗಳಾಗಿ ನಾವು ಜಾನಪದದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳುತ್ತೇವೆ ಎಂದು ಅಭಿಪ್ರಾಯಿಸಿದರು.
ಕೀಲಾರ ಕ್ಷೀರಸಾಗರ ಮಿತ್ರಕೂಟ ಅಧ್ಯಕ್ಷ ಕೆ.ಜಯಶಂಕರ್, ಸಂಚಾಲಕ ಕೆ.ಎಂ.ಕೃಷ್ಣೇಗೌಡ ಕೀಲಾರ, ಕರ್ನಾಟಕ ಜಾನಪದ ಪರಿಷತ್ ಮಂಡ್ಯ ತಾಲೂಕು ಘಟಕ ಅಧ್ಯಕ್ಷ ಕಾರಸವಾಡಿ ಮಹದೇವು, ಜಾನಪದ ಅಕಾಡೆಮಿ ರಿಜಿಸ್ಟರ್ ಎನ್.ನಮ್ರತಾ, ಮಹಿಳಾ ಸರ್ಕಾರಿ ಕಾಲೇಜು ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಚ್.ಕೃಷ್ಣೇಗೌಡ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಚಂದ್ರಕಾಂತ್, ಜಾನಪದ ವಿದ್ವಾಂಸ ಪ್ರೊ.ವ.ನಂ.ಶಿವರಾಮು ಇತರರಿದ್ದರು.