

ಹುಬ್ಬಳ್ಳಿ: ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಹತ್ಯೆಗೆ ಸಂಚು ರೂಪಿಸಿದವರನ್ನು ತಕ್ಷಣ ಬಂಧಿಸಿ, ಕೃತ್ಯದ ಹಿಂದಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ತಮಟಗಾರ ಅವರಿಗೆ ಸೂಕ್ತ ಬಂದೋಬಸ್ತ್ ಒದಗಿಸಬೇಕೆಂದು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ನಿಯೋಗವು ಮನವಿ ಮಾಡಿದೆ.
ಇಲ್ಲಿಯ ನವನಗರದ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ನಿಯೋಗವು, ವಿದ್ಯಾಕಾಶಿ ಧಾರವಾಡವು ಶಿಕ್ಷಣ ಹಾಗೂ ಶಾಂತಿ, ಸುವ್ಯವಸ್ಥೆಗೆ ಹೆಸರಾದ ನಗರ. ಇತ್ತೀಚೆಗೆ ಅವಳಿನಗರಾದ್ಯಂತ ಪುಂಡರ ಹಾವಳಿ, ಮಾದಕ ದ್ರವ್ಯ ಸೇವನೆ, ಮಾರಾಟದಂತಹ ಪ್ರಕರಣಗಳು ಹೆಚ್ಚುತ್ತಿವೆ.
ಇದರ ವಿರುದ್ಧ ಪೊಲೀಸರು ಕಟ್ಟುನಿಟ್ಟಾಗಿ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಇದೇ ರೀತಿ ಹತ್ಯೆಗೆ ಸಂಚು ರೂಪಿಸಿದವರನ್ನು ಕೂಡಲೇ ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಸಂವಿಧಾನ ಸುರಕ್ಷಾ ಸಮಿತಿಯ ಪದಾಧಿಕಾರಿಗಳಾದ ಅನ್ವರ್ ಮುಧೋಳ, ಅಶ್ರಫ್ ಅಲಿ, ಮುನಾಫ ದೇವಗಿರಿ, ಮಜರ ಖಾನ, ಕಾಂಗ್ರೆಸ್ ಮುಖಂಡರಾದ ರಾಜಶೇಖರ ಮೆಣಸಿನಕಾಯಿ, ಬಾಬಾಜಾನ ಮುಧೋಳ, ಬಸವರಾಜ ಕಿತ್ತೂರ, ರಫೀಕ್ ದರ್ಗಾದ, ಮುಂತಾದವರು ಉಪಸ್ಥಿತರಿದ್ದರು.