

ವಿಜಯಪುರ: ಭೀಕರ ಬರದಿಂದ ತತ್ತರಿಸಿರುವ ರೈತರಿಗೆ ಈಗಾಗಲೇ ಸರ್ಕಾರ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಸುತ್ತಿದೆ. ಆದರೆ, ಶೋಷಿತ ಎಸ್‌ಸಿ-ಎಸ್‌ಟಿ ಸಮುದಾಯದವರು ಬಿತ್ತನೆ ಬೀಜ ಮತ್ತು ರಸಗೊಬ್ಬರ ಸಹ ಕೊಳ್ಳದಂಥ ಸ್ಥಿತಿ ಇದ್ದು, ಸರ್ಕಾರ ಈ ಸಮುದಾಯಗಳಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಸಬೇಕೆಂದು ತಳವಾರ ಸಮಾಜ ಸೇವಾ ಸಮಿತಿಯ ಪದಾಧಿಕಾರಿಗಳು ಸೋಮವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಸೋಮು ಜಮಾದಾರ ಮಾತನಾಡಿ, ಪ್ರಸ್ತುತ ಎಸ್‌ಸಿ-ಎಸ್‌ಟಿ ಸಮುದಾಯದ ಹಲವರಿಗೆ ಜಮೀನುಗಳಿಲ್ಲ. ಇದ್ದರೂ ಸ್ವಲ್ಪ ಪ್ರಮಾಣದಲ್ಲಿದ್ದು, ಅದರ ನಿರ್ವಹಣೆಗೆ ಬಂಡವಾಳವಿಲ್ಲ. ಭೀಕರ ಬರದಿಂದ ಕಂಗಾಲಾಗಿರುವ ಎಸ್‌ಸಿ-ಎಸ್‌ಟಿ ಸಮುದಾಯದ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೂ ಗತಿಯಿಲ್ಲದಂತಾಗಿ ಅಸಾಹಕತೆಯಿಂದ ಕುಳಿತಿದ್ದಾರೆ. ಸರ್ಕಾರ ಅಂತಹ ಸಮುದಾಯಗಳ ನೆರವಿಗೆ ಧಾವಿಸಿಬೇಕು. ಕೂಡಲೇ ಸರ್ಕಾರದಿಂದ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೃಷಿ ಪರಿಕರಗಳನ್ನು ರಿಯಾಯಿತಿ ದರಗಳಲ್ಲಿ ಪೂರೈಸುವ ಮೂಲಕ ರೈತರಿಗೆ ಅನೂಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು.
ರೇವಣ್ಣ ಹತ್ತಳ್ಳಿ, ನಾರಾಯಣ ವಾಲಿಕಾರ, ಆಕಾಶ ಕೋಳಿ, ಆನಂದ ತಳವಾರ, ಶಿವಶರಣ ನಾಟಿಕಾರ, ಚಂದು ಡೊಂಗ್ರೋಜಿ, ಅಂಬಣ್ಣ ಡೊಂಗ್ರೋಜಿ, ಸಂಜು ತಳವಾರ, ಈಶ್ವರ ಮಣಗಿರಿ ಮತ್ತಿತರರಿದ್ದರು.