

ಬೆಳ್ತಂಗಡಿ: ಕಳಿಯ ಗ್ರಾಮದ ಗೋವಿಂದೂರು ಎಂಬಲ್ಲಿ ರಿಕ್ಷಾ ಚಾಲಕ ಹಾಗೂ ಆತನ ಸಹೋದರನ ಮೇಲೆ ತಂಡವೊಂದು ತಲವಾರಿನಿಂದ ದಾಳಿ ನಡೆಸಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡಿರುವ ನೆಲ್ಲಿಗುಡ್ಡೆ ನಿವಾಸಿ ಆಟೋ ಚಾಲಕ ಹೈದರ್ (34) ಹಾಗೂ ಆತನ ಅಣ್ಣ ರಫೀಕ್‌ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಸಂಬಂಧಿಸಿ ಪರಿಸರದ ನಿವಾಸಿ ಅಶುತೋಷ್ (30) ಹಾಗೂ ಆತನ ಸಹಚರರಾದ ಮಚ್ಚಿನ ಗ್ರಾಮದ ನಿವಾಸಿ ಚಂದ್ರಹಾಸ (25), ಲತಿನ್ (21) ಎಂಬುವರನ್ನು ಬೆಳ್ತಂಗಡಿ ಪೊಲೀಸರು ರಾತ್ರಿಯೇ ಕಾರ್ಯಾಚರಣೆ ನಡೆಸಿ ಸ್ಥಳೀಯರ ಸಹಕಾರದೊಂದಿಗೆ ಬಂಧಿಸಿದ್ದಾರೆ.
ಅಶುತೋಷ್ ಹಾಗೂ ಹೈದರ್ ನಡುವೆ ಜಾಗದ ಸಂಬಂಧಿಸಿ ವಿವಾದವಿತ್ತು. ಹೈದರ್ ಮಂಗಳವಾರ ರಾತ್ರಿ ಬಾಡಿಗೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅವರನ್ನು ಹಿಂಬಾಲಿಸಿಕೊಂಡು ಬಂದ ಆರೋಪಿಗಳು ಗೋವಿಂದೂರು ಶಾಲೆಯ ಬಳಿ ಅಡ್ಡಗಟ್ಟಿ ತಲವಾರಿನಿಂದ ಕೈಗೆ, ಭುಜಕ್ಕೆ ಕಡಿದ್ದಾರೆ. ಗಲಾಟೆ ಶಬ್ದ ಕೇಳಿ ಅಲ್ಲಿಗೆ ಬಂದ ಹೈದರ್‌ನ ಅಣ್ಣ ರಫೀಕ್ ಗಲಾಟೆ ಬಿಡಿಸಲು ಯತ್ನಿಸಿದಾಗ ಆತನ ಮೇಲೆಯೂ ಈ ತಂಡ ತಲವಾರಿನಿಂದ ಕಡಿದು ಗಾಯಗೊಳಿಸಿದೆ. ಸ್ಥಳೀಯರು ಬರುವುದನ್ನು ಕಂಡು ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.