ನರೇಗಾದಡಿ ಕೈತೋಟ ನಿರ್ವಹಣೆಗೆ ಮುಂದಾದ ತಾಪಂ

Rmgm-Ph-02-Kaithota Gida Narega Sasi Veeksane TP Eo- Annahalli Vilage Nursary -2-11-2023
Published on

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಗ್ರಾಮೀಣ ಜನರಿಗೆ ಪೌಷ್ಟಿಕ ಆಹಾರ ಒದಗಿಸಲು ಮುಂದಾಗಿರುವ ತಾಪಂ ನರೇಗಾ ಯೋಜನೆಯಡಿ ಮನೆಯಂಗಳದಲ್ಲಿ ಕೈತೋಟ ನಿರ್ವಹಣೆಗಾಗಿ ಉಚಿತ ಗಿಡ ನೀಡುವ ಮೂಲಕ ಆರೋಗ್ಯ ವೃದ್ಧಿಯ ಕೆಲಸಕ್ಕೆ ಕೈ ಹಾಕಿದೆ.

ಹಳ್ಳಿಗಳಲ್ಲಿ ಹಿಂದೆ ಪಪ್ಪಾಯ, ಸೀಬೆ, ನಿಂಬೆ, ಕರಿಬೇವು, ನುಗ್ಗೆ ಮುಂತಾದ ಪೌಷ್ಟಿಕ ಗಿಡಗಳು ಕಾಣಸಿಗುತ್ತಿದ್ದವು. ಯಾವುದೇ ರಾಸಾಯನಿಕ ಇಲ್ಲದೆ ಬೆಳೆದ ತಾಜಾಯುಕ್ತ ಹಣ್ಣು, ತರಕಾರಿ ಮನೆಯಂಗಳದಲ್ಲೇ ಸಿಗುತ್ತಿದ್ದವು. ಕಾಲಕ್ರಮೇಣ ಆಧುನೀಕರಣದತ್ತ ಜನರು ವಾಲಿದ ಪರಿಣಾಮ ಮನೆಯಂಗಳದ ಕೈತೋಟಗಳು ದೂರಾದವು.

ಆದರೆ, ಇಂದು ಜನರು ಯಾವುದೇ ರಾಸಾಯನಿಕ ಮಿಶ್ರಣ ಇಲ್ಲದೆ ಹಸಿರು ಹಸಿರಾಗಿ ಬೆಳೆದ ತಾಜವಾಗಿ ಸಿಗುವ ಪೌಷ್ಟಿಕ ಉತ್ಪನ್ನ ಸಿಗಬೇಕು ಎಂಬುದು ಬಹು ಜನರ ಆಶಯ. ಜನರ ಆಶಯಕ್ಕೆ ತಕ್ಕಂತೆ ಜಿಪಂ, ತಾಪಂ ಆರೋಗ್ಯ ವೃದ್ಧಿಗಾಗಿ ಕೈತೋಟ ಯೋಜನೆಗೆ ಮಹತ್ವ ನೀಡಿದೆ.

ತಯಾರಿ ಹೇಗೆ?

ಕೈತೋಟ ನಿರ್ವಹಣೆಗೆ ಫಲಾನುಭವಿಗೆ 4,500 ರೂ. ಆರ್ಥಿಕ ನೆರವು ಸಿಗಲಿದೆ. ಎಂಬಿಕೆ ಸಂಜೀವಿನಿ ಒಕ್ಕೂಟಗಳಿಂದ ರಾಮನಗರ ತಾಲೂಕಿನ ದೊಡ್ಡಗಂಗವಾಡಿ ಗ್ರಾಪಂನ ನಿಜಿಯಪ್ಪನದೊಡ್ಡಿ, ಹುಲಿಕೆರೆ ಗುನ್ನೂರು ಗ್ರಾಪಂ ಅವ್ವೇರಹಳ್ಳಿ, ಗೋಪಳ್ಳಿ ಗ್ರಾಪಂ ಅಣ್ಣಹಳ್ಳಿಯಲ್ಲಿ ನರ್ಸರಿ ಮೂಲಕ ಸಂಪೂರ್ಣ ವೈಜ್ಞಾನಿಕ ರೀತಿಯಲ್ಲಿ ಉತ್ತಮವಾಗಿ ಗಿಡ ಬೆಳೆಸಲಾಗಿದೆ. ಪೌಷ್ಟಿಕ ಕೈತೋಟಗಳಲ್ಲಿ ಬಳಕೆಯಾಗುವ ಗಿಡಗಳ ಜತೆಗೆ ರೇಷ್ಮೆ ಕಡ್ಡಿ ಬೆಳೆಸಲಾಗಿದೆ. ಮೂರು ನರ್ಸರಿಯಲ್ಲಿ ಪಪ್ಪಾಯ, ನುಗ್ಗೆ, ಕರಿಬೇವು, ನಿಂಬೆ, ಸೀಬೆ, 25 ಸಾವಿರ ಗಿಡಗಳು, ರೇಷ್ಮೆ ಉದ್ಯಮಕ್ಕೆ ಪೂರಕವಾಗುವಂತೆ ರೈತರಿಗೆ ವಿತರಿಸಲು 25 ಸಾವಿರ ರೂ. ರೇಷ್ಮೆಕಡ್ಡಿ ಬೆಳೆಸಲಾಗಿದೆ.

ಉಚಿತ ವಿತರಣೆ

ಒಂದು ಪಾಕೆಟ್​ನಲ್ಲಿ ಬೆಳೆಸಿದ ಪೌಷ್ಟಿಕ ಗಿಡಗಳಿಗೆ 10 ರೂ. ರೇಷ್ಮೆ ಕಡ್ಡಿಗೆ 6ರೂ. ನರೇಗಾ ಯೋಜನೆಯಲ್ಲಿ ಆರ್ಥಿಕ ನೆರವು ಬೆಳೆಸಿದವರಿಗೆ ಸಿಗಲಿದೆ. ನರ್ಸರಿಯಲ್ಲಿ ಬೆಳೆಸಿದ ಗಿಡಗಳನ್ನು ಕೈತೋಟ ನಿರ್ವಹಣೆ ಮಾಡುವ ಫಲಾನುಭವಿಗೆ ಉಚಿತವಾಗಿ ನೀಡಲಾಗುತ್ತದೆ ಎನ್ನುತ್ತಾರೆ ನರೇಗಾ ಯೋಜನೆ ತಾಂತ್ರಿಕ ಅಭಿಯಂತರ ಕಾರ್ತಿಕ್​.

ಕೈತೋಟ ನಿರ್ವಹಣೆಗೆ ಒತ್ತು ನೀಡಲಾಗಿದ್ದು, ಕೈತೋಟ ನಿರ್ವಹಣೆಗೆ ಪ್ರಾಮುಖ್ಯತೆ ಕೊಟ್ಟು ಉಚಿತವಾಗಿ ಗಿಡ ನೀಡಿ ನರೇಗಾ ಯೋಜನೆ ಯಶಸ್ವಿಗೆ ಕ್ರಮ ಕೈಗೊಳ್ಳಲಾಗಿದೆ.

ಪ್ರದಿಪ್​, ಇಒ, ತಾಪಂ ರಾಮನಗರ

ನರೇಗಾ ಯೋಜನೆಯಲ್ಲಿ ಪೌಷ್ಟಿಕ ಗಿಡ ಬೆಳೆಸಲು ಸಂಜೀವಿನಿ ಒಕ್ಕೂಟಕ್ಕೆ ನೀಡಿರುವುದು ಒಂದಷ್ಟು ಆರ್ಥಿಕವಾಗಿ ಮಹಿಳೆಯರು ಸಬಲರಾಗಲು ಉಪಯುಕ್ತವಾಗಿದೆ. ಗಿಡಕ್ಕೆ 10 ರೂ. ಸಹಾಯಧನ ಸಾಲದು ವೈಜ್ಞಾನಿಕವಾಗಿ ಗಿಡ ಬೆಳೆಸಬೇಕಿರುವ ಕಾರಣ ಹೆಚ್ಚಿನ ಖರ್ಚು ತಗಲುತ್ತದೆ. 18 ರಿಂದ 20 ರೂ. ಗಿಡಕ್ಕೆ ನೀಡಿದರೆ ಸಹಾಯಕವಾಗುತ್ತದೆ.

ಲಕ್ಷ್ಮೀದೇವಮ್ಮ, ಸಂಜೀವಿನಿ ಒಕ್ಕೂಟ ಸದಸ್ಯೆ, ನಿಜಯಪ್ಪನದೊಡ್ಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net