ಮಾರ್ಚ್‌ನಲ್ಲಿ ತಾಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ

FotoJet (2)
Published on

 ಮಾಗಡಿ : ತಾಲೂಕು ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾದಿಗೊಡ್ಡನಹಳ್ಳಿ ಗುಡ್ಡದ ರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ಮಾರ್ಚ್‌ನಲ್ಲಿ ನಡೆಸಲಾಗುವುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸಮ್ಮೇಳನದ ಲಾಂಛನ ಅನಾವರಣಗೊಳಿಸಿ ಮಾತನಾಡಿದ ಅವರು, ರಾಮನಗರ ಜಿಲ್ಲೆಯಾದ ಬಳಿಕ ತಾಲೂಕಿನಲ್ಲಿ 10ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಕನ್ನಡಿಗರ ಭಾಷಾಭಿಮಾನ ಮೆರೆಯಲು ನುಡಿ ಜಾತ್ರೆ ಅತ್ಯಗತ್ಯ ಹೀಗಾಗಿ ತಾಲೂಕು ಆಡಳಿತ ಸರ್ವ ರೀತಿಯಲ್ಲಿ ಸಹಕಾರ ನೀಡಲಿದೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ತಿ.ನಾ ಪದ್ಮನಾಭ ಮಾತನಾಡಿ, ಮಾಗಡಿ ತಾಲೂಕಿನ ಸೋಲೂರು ಹಾಗೂ ಕುದೂರು ಹೋಬಳಿಯ ಗಡಿ ಭಾಗದಲ್ಲಿರುವ ಗುಡ್ಡದ ರಂಗನಾಥ ಸ್ವಾಮಿ ಬೆಟ್ಟದಲ್ಲಿ ಈ ಬಾರಿಯ ಸಮ್ಮೇಳನ ನಡೆಯುತ್ತಿದೆ. ಮುಂದಿನ ವಾರ ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು, ಸಮ್ಮೇಳನದ ಲಾಂಛನವನ್ನು ಬಿಡುಗಡೆ ಮಾಡಿಸುವುದು ಪ್ರತಿತಿ. ಹೀಗಾಗಿ ಮಾಗಡಿ ತಾಲೂಕಿನ ವೈಶಿಷ್ಟ್ಯಗಳನ್ನು ಒಳಗೊಂಡ ಲಾಂಛನವನ್ನು ವಿನ್ಯಾಸಗೊಳಿಸಿ ತಾಲೂಕು ಆಡಳಿತದ ವತಿಯಿಂದ ಬಿಡುಗಡೆ ಮಾಡಿಸಲಾಗಿದೆ ಎಂದರು.

ಲಾಂಛನದ ವೈಶಿಷ್ಯ

ಸಾವನದುರ್ಗ ಬೆಟ್ಟ, ನಾಡಪ್ರಭು ಕೆಂಪೇಗೌಡರು ಹಾಗೂ ಮಾಗಡಿಯ ಐತಿಹಾಸಿಕ ಪ್ರವಾಸಿ ಕ್ಷೇತ್ರಗಳಾದ ಶ್ರೀರಂಗನಾಥ ಸ್ವಾಮಿ, ಶ್ರೀಸೋಮೇಶ್ವರ, ಗುಡ್ಡದರಂಗ, ತಟ್ಟೆಕೆರೆ ರಂಗನಾಥ, ಸುಗ್ಗನಹಳ್ಳಿ ಗರುಡ, ಕಲ್ಯ ಬೆಟ್ಟ, ಮಂಚನಬೆಲೆ ಜಲಾಶಯ ಹಾಗೂ ಎಚ್. ವಿ ನಂಜುಂಡಯ್ಯ, ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ಬಾಲ ಗಂಗಾಧರನಾಥ ಸ್ವಾಮೀಜಿ, ಕವಿ ಸಿದ್ದಲಿಂಗಯ್ಯ, ಸಾಲುಮರದ ತಿಮ್ಮಕ್ಕ, ಹೊನ್ನಪ್ಪ ಭಾಗವತರು, ಬೊಂಬೆ ಆಟದ ರಂಗನಾಥರ, ತಾಯಿ ಭುವನೇಶ್ವರಿಯ ಚಿತ್ರವನ್ನು ಒಳಗೊಂಡ ವಿನ್ಯಾಸಗಳು 10ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಲಾಂಛನದಲ್ಲಿ ಅಡಕವಾಗಿವೆ ಎಂದರು. ಕೆಡಿಪಿ ಸದಸ್ಯರಾದ ಗೀತಾ, ಪ್ರಕಾಶ್, ಸಾಹಿತ್ಯ ಪರಿಷತ್ ಕಾರ್ಯದರ್ಶಿ ನಾರಾಯಣ್, ಟಿ.ಎಂ.ಶ್ರೀನಿವಾಸ್, ದೊಡ್ಡಿ ನಾಗೇಶ್ ಸೇರಿ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net