ಕಾಲುಬಾಯಿ ಲಸಿಕೆ ಅಭಿಯಾನಕ್ಕೆ ಸಂಚಾರಕ್ಕೆ ವಾಹನ ವ್ಯವಸ್ಥೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಕಲ್ಪಿಸಬೇಕು

PTR_27 SEP_5
Published on

ಪುತ್ತೂರು: ಬೀದಿ ಶ್ವಾನಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಗೆ ಗ್ರಾಮ ಪಂಚಾಯಿತಿಯಲ್ಲಿ ೫೦ ಸಾವಿರ ರೂ. ಅನುದಾನ ಮೀಸಲಿಡಬೇಕು. ಕಾಲುಬಾಯಿ ಲಸಿಕೆ ಅಭಿಯಾನಕ್ಕೆ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚಾರಕ್ಕೆ ವಾಹನ ವ್ಯವಸ್ಥೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಕಲ್ಪಿಸಬೇಕು. ಬಿಸಿಎಂ ವಸತಿ ನಿಲಯಗಳಿಗೆ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡುವ ಪ್ರಕ್ರಿಯೆ ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ.

ಇದು ಬುಧವಾರ ತಾಲೂಕು ಪಂಚಾಯಿತಿ ಸಾಮರ್ಥ್ಯಸೌಧದ ಸಭಾಂಗಣದಲ್ಲಿ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೇಳಿ ಬಂದ ಬೇಡಿಕೆಗಳಾಗಿದೆ.

ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಮಾತನಾಡಿ ಬೇರೆ ಪ್ರದೇಶದಕ್ಕೆ ಹೋಗಿ ಬಂದ ವ್ಯಕ್ತಿಯಲ್ಲಿ ತಾಲೂಕಿನ ಮೊದಲ ಮಲೇರಿಯಾ ಪತ್ತೆಯಾಗಿದೆ. ತಾಲೂಕಿನಲ್ಲಿ ಡೆಂಗ್ಯೂ ಜ್ವರ ಪ್ರಕರಣ ಸಂಖ್ಯೆ ಹೆಚ್ಚಾಗಿದೆ. ಫಾಗಿಂಗ್ ಯಂತ್ರ ಪ್ರತೀ ಗ್ರಾಮ ಪಂಚಾಯಿತಿಯಲ್ಲಿ ಇರಬೇಕೆಂಬ ನಿಟ್ಟಿನಲ್ಲಿ ಸೂಚನೆಯನ್ನು ನೀಡಲಾಗಿದ್ದು, ಕೆಲವು ಪಂಚಾಯಿತಿಯಲ್ಲಿ ಇನ್ನೂ ಇಲ್ಲದ ಕಾರಣ ಫಾಗಿಂಗ್ ನಡೆಸಲಾಗುತ್ತಿಲ್ಲ. ಆರೋಗ್ಯ ಇಲಾಖೆ ವತಿಯಿಂದ ಆಯುಷ್ಮಾನ್ ಕಾರ್ಡ್ ನೋಂದಣಿಗೆ ಅಲ್ಲಲ್ಲಿ ಹೆಲ್ತ್ ಮೇಳ ನಡೆಯುತ್ತಿದೆ. ಇದಕ್ಕೆ ಗ್ರಾಮ ಒನ್ ಕೇಂದ್ರದವರು ಬರಬೇಕಾಗಿದ್ದು, ಹೆಚ್ಚಿನವರು ಬರುತ್ತಿಲ್ಲ ಎಂದು ತಿಳಿಸಿದರು.

ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿ ಫಾಗಿಂಗ್ ಯಂತ್ರ ಖರೀದಿಸುವಂತೆ ಗ್ರಾಮ ಪಂಚಾಯಿತಿಗಳಿಗೆ ಸೂಚನೆ ನೀಡಲಾಗಿದ್ದು, ಕೆಲವರು ಖರೀದಿಸಿದ್ದಾರೆ ಮತ್ತು ಉಳಿದವರಿಗೆ ಸೂಚನೆ ನೀಡಲಾಗುವುದು. ನಿಯಮ ಪ್ರಕಾರ ಗ್ರಾಮಸಭೆಗೆ ಗ್ರಾಮಮಟ್ಟದ ಅಧಿಕಾರಿಗಳು ಉಪಸ್ಥಿತರಿರಬೇಕು, ಹೊರತು ತಾಲೂಕು ಮಟ್ಟದ ಅಧಿಕಾರಿಗಳು ಅಲ್ಲ. ಚರ್ಚಾ ನಿಯಂತ್ರಣಾಧಿಕಾರಿ ಮಾತ್ರ ತಾಲೂಕು ಮಟ್ಟದ ಅಧಿಕಾರಿ ಆಗಿರುತ್ತಾರೆ. ಈ ವಿಚಾರವನ್ನು ಗ್ರಾಮಸ್ಥರಿಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ ಆಡಳಿತಾಧಿಕಾರಿ ಸಂದ್ಯಾ ಮಾತನಾಡಿ ವಿದ್ಯಾರ್ಥಿ ಕಲಿಯುವ ಶಿಕ್ಷಣ ಸಂಸ್ಥೆಗೆ ಹತ್ತಿರ ಇರುವ ಹಾಸ್ಟೆಲ್‌ಗೆ ಸೇರ್ಪಡೆ ಮಾಡುವುದು ಉತ್ತಮ. ಕಳೆದ ವರ್ಷದ ತನಕ ತಾಲೂಕು ಮಟ್ಟದಲ್ಲೇ ಆಯ್ಕೆ ನಡೆಯುತ್ತಿದ್ದು, ಈ ನಿಯಮ ಪಾಲನೆ ಆಗುತಿತ್ತು. ಪ್ರಸ್ತುತ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗೆ ರಾಜ್ಯಮಟ್ಟದಲ್ಲೇ ಹಾಸ್ಟೆಲ್ ನಿಗದಿ ಆಗುವ ಕಾರಣ ಶಿಕ್ಷಣ ಸಂಸ್ಥೆ ಇರುವ ಸ್ಥಳದಿಂದ ಹಲವಾರು ಕಿ.ಮೀ.ದೂರದಲ್ಲಿ ಇರುವ ಹಾಸ್ಟೆಲ್‌ಗಳಲ್ಲಿ ಪ್ಲೇಸ್‌ಮೆಂಟ್ ಆಗುತ್ತಿರುವ ಬಗ್ಗೆ ಜಿಲ್ಲಾ ಮಟ್ಟದ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಶಾಲೆಗಳಲ್ಲಿ ಈ ತನಕ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿಲ್ಲ ಎಂದು ಬಿಇಓ ಲೋಕೇಶ್ ಎಸ್.ಆರ್. ಹೇಳಿದರು. ಸರಕಾರಿ ಕಾರ್ಯಕ್ರಮಗಳಲ್ಲಿ ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಡಳಿತಾಧಿಕಾರಿ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರಿ ಹಾಸ್ಟೆಲ್‌ಗಳಿಗೆ ಸಚಿವರು, ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಹೀಗಾಗಿ ಸ್ವಚ್ಛತೆ, ಗುಣಮಟ್ಟದ ಆಹಾರ ಪೂರೈಕೆ ಬಗ್ಗೆ ಸಿಬಂದಿಗಳು ಹೆಚ್ಚಿನ ಗಮನ ಹರಿಸುವಂತೆ ಸೂಚಿಸಲಾಯಿತು.

ಯೋಜನಾಧಿಕಾರಿ ಸುಕನ್ಯಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net