ರೈತರೊಂದಿಗೆ ಅನುಚಿತ ವರ್ತನೆ ವಿರೋಧಿಸಿ ಹರಿಹರದಲ್ಲಿ ಪ್ರತಿಭಟನೆ

HRR 0000
Published on

ಹರಿಹರ: ಜಮೀನಿನ ಅಳತೆ ಮಾಡುವಾಗ ಹನಗವಾಡಿ ಗ್ರಾಪಂ ಪಿಡಿಒ ರೈತರೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಬುಧವಾರ ಇಲ್ಲಿನ ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ರೈತ ಸಂಘದ ತಾಲೂಕಾಧ್ಯಕ್ಷ ಜಿ. ಪ್ರಭುಗೌಡ್ರು ಮಾತನಾಡಿ, ದೊಗ್ಗಳ್ಳಿ ಗ್ರಾಮದ ರೈತರೊಬ್ಬರ ಅರ್ಜಿ ಅನ್ವಯ ಭೂಮಾಪನಾ ಇಲಾಖೆ ಸಿಬ್ಬಂದಿ ಸೆ.16 ರಂದು ಸ್ಥಳಕ್ಕೆ ಆಗಮಿಸಿದ್ದಾಗ ಪಿಡಿಒ ಪ್ರಭಾಕರ ಅವಾಚ್ಯ ಶಬ್ದಗಳಿಂದ ಅರ್ಜಿದಾರನನ್ನು ನಿಂದಿಸಿದ್ದಾರೆ. ಆತನ ಪರವಾಗಿ ವರದಿ ನೀಡದಂತೆ ಸಿಬ್ಬಂದಿ ಮೇಲೆ ಒತ್ತಡ ಹೇರಿದ್ದಾರೆ. ಇ ಸ್ವತ್ತು ನೀಡಲು ಗ್ರಾಮಸ್ಥರಿಂದ ಹಣ ಪಡೆಯುತ್ತಾರೆಂಬ ದೂರಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಪಿಡಿಒ, ಅವಾಚ್ಯವಾಗಿ ಮಾತನಾಡಿಲ್ಲ, ಇ ಸ್ವತ್ತು ನೀಡಲು ಹಣಕ್ಕೆ ಬೇಡಿಕೆ ಇಟ್ಟಿದ್ದರೆ ಲೋಕಾಯುಕ್ತರಿಗೆ ದೂರು ನೀಡಬಹುದು. ಕಾರ್ಯ ಒತ್ತಡ, ಆನ್​ಲೈನ್ ಮೀಟಿಂಗ್​ನಿಂದಾಗಿ ಕೆಲಸ ಮಾಡಿಕೊಡುವುದು ತಡವಾಗಬಹುದು ಎಂದು ಸಮಜಾಯಿಷಿ ನೀಡಿದರು.

ನಂತರ ಇಒ ಎಸ್.ಪಿ. ಸುಮಲತಾ ಮಾತನಾಡಿ, ರೈತರನ್ನು ನಿಂದಿಸಬಾರದು, ನಿಗದಿತ ಅವಧಿಯಲ್ಲಿ ಗ್ರಾಪಂ ಕೆಲಸ, ಕಾರ್ಯಗಳನ್ನು ಮಾಡಿಕೊಡಬೇಕು ಎಂದು ಸೂಚಿಸಿದರು. ಅರ್ಜಿದಾರ ರೈತ ಜಮೀನಿನ ಅಳತೆಯನ್ನು ಬೆಳೆ ಕಟಾವು ಮಾಡಿದ ನಂತರ ಹಿಂದಿನ ಶುಲ್ಕದಲ್ಲೇ ಮಾಡಿಕೊಡಬೇಕೆಂದು ಭೂ ಮಾಪನಾ ಇಲಾಖೆ ಸಹಾಯಕ ನಿರ್ದೇಶಕ ಕಲ್ಲೇಶ್ ಅವರಿಗೆ ಸೂಚಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ದಾವಣಗೆರೆ ಅಂಜಿನಪ್ಪ, ದೊಗ್ಗಳ್ಳಿ ಮಹೇಶ್ವರಪ್ಪ, ಗರಡಿಮನಿ ಬಸಣ್ಣ, ಅಮರಾವತಿ ಚಂದ್ರಪ್ಪ, ಬೆಳವನೂರು ಕರಿಬಸಪ್ಪ, ಕೆ.ಎನ್. ಭೀಮಪ್ಪ, ಎಂ.ಬಿ. ಪಾಟೀಲ್ ಪಾಳ್ಯ, ನಾಗರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net