ಬಗರ್ ಹುಕುಂ ಸಾಗುವಳಿ ಸಕ್ರಮಕ್ಕೆ ಕ್ರಮ

dj hyr minister
Published on

ಹಿರಿಯೂರು: ಬಗರ್‌ಹುಕುಂ ಮಾಡುವ ಅರ್ಹ ರೈತರಿಗೆ ಸಾಗುವಳಿ ಚೀಟಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬಗರ್ ಹುಕುಂ ಸದಸ್ಯರು-ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದ್ದು, ದಶಕಗಳಿಂದ ಸರ್ಕಾರಿ ಭೂಮಿ ಉಳುಮೆ ಮಾಡುತ್ತಿರುವ ರೈತರು ಅದನ್ನು ಸಕ್ರಮಗೊಳಿಸುವಂತೆ ಬೇಡಿಕೆ ಸಲ್ಲಿಸಿದ್ದಾರೆ ಎಂದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ನಡೆದಿದೆ. ಸಾಗುವಳಿದಾರರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು. ನಮೂನೆ 53ರಲ್ಲಿ 254 ಅರ್ಜಿ ಬಾಕಿ ಇದ್ದು, ನ.57ರಲ್ಲಿ 18116 ಮನವಿ ಸ್ವೀಕೃತವಾಗಿದೆ. 2215 ಅರ್ಜಿ ವಿಲೇವಾರಿಗೊಂಡಿದ್ದು, ಉಳಿದ 15901 ಅರ್ಜಿ ವಿಲೇವಾರಿಗಾಗಿ ಬಾಕಿ ಪ್ರಕರಣಗಳಿವೆ.

ಕಂದಾಯ ಇಲಾಖೆ ಭೂ ಮಂಜೂರಾತಿ ತಂತ್ರಾಂಶದಲ್ಲಿ ನಮೂದು ಮಾಡಿ, ಅರ್ಹ ಪ್ರಕರಣಗಳನ್ನು ಸಮಿತಿ ಮುಂದೆ ಮಂಡಿಸಲು ಹಾಗೂ ಅನರ್ಹ ಪ್ರಕರಣಗಳನ್ನು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಿ ವಿಲೇಗೊಳಿಸಲು ಅಗತ್ಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರ್ ರಾಜೇಶ್‌ಕುಮಾರ್, ಸಮಿತಿ ಸದಸ್ಯರಾದ ಡಾ.ಜೆ.ಆರ್.ಸುಜಾತಾ, ರಂಗಸ್ವಾಮಿ, ಕಣುಮಪ್ಪ, ವಲಯ ಅರಣ್ಯಾಧಿಕಾರಿ ಶಶಿಧರ್, ಎಡಿಎಲ್‌ಆರ್ ಏಕನಾಥ್, ಉಪ ತಹಸೀಲ್ದಾರ್ ತಿಪ್ಪೇಸ್ವಾಮಿ, ಕಂದಾಯ ನಿರೀಕ್ಷಕ ಎನ್.ವರದರಾಜ್, ಸ್ವಾಮಿ, ವೇದಾಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net