

ನಂಜನಗೂಡು: ಮಧ್ಯಾಹ್ನ 12 ಗಂಟೆಯಾದರೂ ತಾಲೂಕು ಕಚೇರಿ ಬಾಗಿಲು ಮಾತ್ರ ತೆರೆದಿಲ್ಲ ಎಂದು ಸಾರ್ವಜನಿಕರು ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿರುವ ತಾಲೂಕು ಆಡಳಿತ ಭವನದಲ್ಲಿರುವ ಜನನ ಮತ್ತು ಮರಣ ಶಾಖೆಯ ಬಾಗಿಲು ತೆರೆದಿರಲಿಲ್ಲ. ಮುಂಜಾನೆಯೇ ದೂರದ ಊರುಗಳಿಂದ ಬಂದ ಸಾರ್ವಜನಿಕರು ಕಚೇರಿ ಬಳಿ ಕಾದು ಕುಳಿತಿದ್ದರು. ಮಧ್ಯಾಹ್ನವಾದರೂ ಯಾವೊಬ್ಬ ಅಧಿಕಾರಿಯೂ ಕಚೇರಿಗೆ ಬಾರದ ಪರಿಣಾಮ ಬೀಗ ತೆಗೆದಿರಲಿಲ್ಲ. ಇದನ್ನು ಗಮನಿಸಿದ ಸಾರ್ವಜನಿಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತೆರಳುತ್ತಿದ್ದರು. ಜನನ ಮತ್ತು ಮರಣ ಪತ್ರವನ್ನು ಪಡೆದುಕೊಳ್ಳಲು ಪರಿತಪಿಸುತ್ತಿದ್ದ ದೃಶ್ಯ ಕಂಡು ಬಂತು.
ಮಾಧ್ಯಮದವರಿಗೆ ವಿಷಯ ತಿಳಿಯುತ್ತಿದ್ದಂತೆ ತಾಲೂಕು ದಂಡಾಧಿಕಾರಿಗೆ ಕರೆ ಮಾಡಿದ ನಂತರ ಸಿಬ್ಬಂದಿ ಮಧ್ಯಾಹ್ನ 12.15 ಕ್ಕೆ ತರಾತುರಿಯಲ್ಲಿ ಬಂದು ಕಚೇರಿ ಬೀಗ ತೆರೆದಿದ್ದಾರೆ.
ಜನನ ಮತ್ತು ಮರಣ ಶಾಖೆ ಅಧಿಕಾರಿಗಳು ಕಚೇರಿ ಸಮಯದಲ್ಲಿ ಬಾಗಿಲು ಮುಚ್ಚಿ ಮದುವೆಗೆ ತೆರಳಿದ್ದರು ಎನ್ನಲಾಗಿದೆ. ಎಲ್ಲರೂ ಮದುವೆಗೆ ಊಟಕ್ಕೆ ಹೋಗಿದ್ದಾರೆ ಎಂದು ಕಚೇರಿಗೆ ಆಗಮಿಸಿದ್ದ ಅಧಿಕಾರಿಯೊಬ್ಬರು ಸಾರ್ವಜನಿಕರಿಗೆ ಹೇಳುತ್ತಿದ್ದರು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಕೆಲಸದ ಸಮಯದಲ್ಲಿ ಕಚೇರಿಗೆ ಬೀಗ ಹಾಕಿ ಮದುವೆಗೆ ಹೋಗಿರುವುದು ಎಷ್ಟು ಸರಿ?. ಇಂತಹ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.