ವೈದ್ಯ, ನರ್ಸ್ ನಿರ್ಲಕ್ಷ್ಯಂದ ತಾಯಿ ಸಾವು, ತಬ್ಬಲಿಯಾಯ್ತು ಹಸುಗೂಸು

web 1
Published on

ಕೊಪ್ಪ: ಸರ್ಕಾರಿ ಆಸ್ಪತ್ರೆ ವೈದ್ಯರು ಹಾಗೂ ದಾದಿಯರ ನಿರ್ಲಕ್ಷ್ಯಂದ ಸೋಮವಾರ ತಡರಾತ್ರಿ ಹೆರಿಗೆ ಸಮಯದಲ್ಲಿ ರಕ್ತಸ್ರಾವವಾಗಿ ತಾಯಿ ಮೃತಪಟ್ಟಿದ್ದು, ಹಸುಗೂಸು ತಬ್ಬಲಿಯಾಗಿದೆ.

ನಾರ್ವೆ ಸಮೀಪದ ಹುಲುಗಾರಿನ ಉಷಾ(24) ಅವರನ್ನು ಹೆರಿಗೆಗಾಗಿ ಜ.25ರಂದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫೆ.3ರಂದು ರಾತ್ರಿ 9 ಗಂಟೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಪ್ರಸೂತಿ ತಜ್ಞ ಡಾ. ಬಾಲಕೃಷ್ಣ ದಾದಿಯರ ಕೈಯಲ್ಲಿ ಹೆರಿಗೆ ಮಾಡಿಸಿದ್ದಾರೆ.

ಹೆರಿಗೆ ವೇಳೆ ತಾಯಿಗೆ ತೀವ್ರ ರಕ್ತಸ್ರಾವ ಉಂಟಾಗಿದೆ. ಈ ಬಗ್ಗೆ ಉಷಾ ಸಂಬಂಧಿಕರಿಗೆ ಮಾಹಿತಿ ನೀಡದೆ ಕೊನೇ ಘಳಿಗೆಯಲ್ಲಿ ರೋಗಿಗೆ ಸಹಜವಾಗಿ ಹೆರಿಗೆ ಆಗಿರುವ ಕಾರಣ ವೈದ್ಯರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿದ್ದಾರೆ. ಉಷಾ ಸಂಬಂಧಿಗಳು ಆಸ್ಪತ್ರೆಗೆ ತೆರಳುವಾಗ ಮಾರ್ಗಮಧ್ಯೆ ತಾಯಿ ಮೃತಪಟ್ಟಿದ್ದಾರೆ ಎಂದು ಮೃತರ ಸಂಬಂಧಿ ನಾರಾಯಣ್ ಪೊಲೀಸ್ ಠಾಣೆ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಉಷಾ ಸಾವಿಗೆ ಡಾ. ಬಾಲಕೃಷ್ಣ ಹಾಗೂ ರಾತ್ರಿ ಪಾಳಿ ದಾದಿಯರ ನಿರ್ಲಕ್ಷ್ಯ ಕಾರಣ. ಈ ಹಿಂದೆಯೂ ವೈದ್ಯರ ನಿರ್ಲಕ್ಷ್ಯಂದ ಹಲವು ಪ್ರಕರಣಗಳಿದ್ದು ಕೂಡಲೇ ಅವರನ್ನು ಅಮಾನತಿನಲ್ಲಿಟ್ಟು ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ಉಷಾ ಸಾವಿಗೆ ಸರ್ಕಾರಿ ಆಸ್ಪತ್ರೆ ವೈದ್ಯರು ಹಾಗೂ ದಾದಿಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಮೃತರ ಸಂಬಂಧಿಗಳು ಕೊಪ್ಪದ ದ್ಯಾವೇಗೌಡ ವೃತ್ತದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ವೈದ್ಯರ ವಿರುದ್ಧ ಘೊಷಣೆ ಕೂಗಿ ಶಿರಸ್ತೇದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಇದೇ ವೈದ್ಯರಿಂದ ಈ ಆಸ್ಪತ್ರೆಯಲ್ಲಿ ಸಾಕಷ್ಟು ಅನಾಹುತಗಳು ನಡೆದಿವೆ. ಈ ಬಗ್ಗೆ ಜಿಲ್ಲಾಧಿಕಾರಿ ತಂಡ ರಚಿಸಿ ತನಿಖೆಗೆ ಆದೇಶಿಸಿದ್ದರು. ತನಿಖೆ ನಡೆದು ಎರಡು ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲಾ ಆರೋಗ್ಯಾಧಿಕಾರಿಗೆ ಅನೇಕ ಬಾರಿ ದೂರು ನೀಡಿದರೂ ವೈದ್ಯರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net