ಮಳೆಗಾಲ ಪೂರ್ವಸಿದ್ಧತೆಗೆ ಕ್ರಮ - ತಾಲೂಕುಮಟ್ಟದ ಅಽಕಾರಿಗಳ ಸಭೆಯಲ್ಲಿ ಎಚ್.ಕೆ.ಕೃಷ್ಣಮೂರ್ತಿ ಸೂಚನೆ

PTR_6 MAY_3
Published on

ಶಾಲೆಗಳ ಕಟ್ಟಡಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಜನರ ದೂರುಗಳಿಗೆ ಸರಿಯಾಗಿ ಸ್ಪಂದಿಸಬೇಕು. ವಸತಿ ನಿಲಯಗಳಲ್ಲಿ ನಿರ್ವಹಣೆಯ ಶಿಕ್ಷಣ ನೀಡಬೇಕು. ಭೂಕುಸಿತ, ಚರಂಡಿ ನಿರ್ವಹಣೆ ಸೇರಿ ಮಳೆಗಾಲದ ಬಗ್ಗೆ ಮುನ್ನೆಚ್ಚರಿಕೆಗಳನ್ನು ಈಗಲೇ ವಹಿಸಬೇಕು. ಪ್ರತಿಯೊಂದು ಕಡೆಗೂ ಅಽಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಪರಿಸ್ಥಿತಿ ಸುಧಾರಿಸುತ್ತದೆ ಎಂದು ನಗರಾಭಿವೃದ್ಧಿ ಜಂಟಿ ಕಾರ್ಯದರ್ಶಿ ಎಚ್.ಕೆ.ಕೃಷ್ಣಮೂರ್ತಿ ಹೇಳಿದರು.

ಪುತ್ತೂರು ತಾಲೂಕು ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಕುಡಿಯುವ ನೀರಿನ ವಿಚಾರಕ್ಕೆ ಸಂಬಂಽಸಿ ನಡೆದ ತಾಲೂಕುಮಟ್ಟದ ಅಽಕಾರಿಗಳ ಸಭೆಯಲ್ಲಿ ಮಾತನಾಡಿದರು.

ಮೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇದ್ದು, ಪೂರ್ವ ತಯಾರಿ ಅಗತ್ಯ. ಕುಡಿಯುವ ನೀರಿಗೆ ತೊಂದರೆ ಎಂಬ ದೂರು ಬರದಂತೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರು ಒದಗಿಸಲು ಸಾಕಷ್ಟು ಮೂಲಗಳಿವೆ. ಕೆರೆ, ಬಾವಿ, ಕೊಳವೆಬಾವಿ, ಕಿಂಡಿಅಣೆಕಟ್ಟುಗಳಿಂದ ನೀರನ್ನು ಒದಗಿಸುವ ಕೆಲಸ ಪ್ರಸ್ತುತ ನಡೆಸಲಾಗುತ್ತಿದೆ. ಇದಕ್ಕೆ ಹೆಚ್ಚಿನ ಒತ್ತು ನೀಡಬೇಕು. ಬೇರೆ ಪರಿಹಾರ ದಾರಿಗಳು ಇಲ್ಲದಾಗ ಮಾತ್ರ ಟ್ಯಾಂಕರ್‌ನಲ್ಲಿ ನೀರು ಒದಗಿಸುವುದಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಬಳಿಕ ಸರ್ವೇ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು. ತಹಸೀಲ್ದಾರ್ ಪುರಂದರ ಹೆಗ್ಡೆ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಽಕಾರಿ ನವೀನ್ ಕುಮಾರ್ ಭಂಡಾರಿ ಉಪಸ್ಥಿತರಿದ್ದರು.

ಅಽಕಾರಿಗಳಿಗೆ ಸೂಚನೆ

ನಗರಸಭೆ ಹಾಗೂ ಗ್ರಾಮ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಒದಗಿಸುವ ಮೇಲ್ವಿಚಾರಣೆಗಾಗಿ ತಾಲೂಕುಮಟ್ಟದಲ್ಲಿ ತಂಡವೊಂದನ್ನು ರಚಿಸಬೇಕು. ಗುಣಮಟ್ಟದ ನೀರು ಒದಗಿಸುವಲ್ಲಿ ಅಽಕಾರಿಗಳು ಕ್ರಮ ಕೈಗೊಳ್ಳಬೇಕು. ಎಲ್ಲ ಇಲಾಖೆಗಳೂ ಇದರಲ್ಲಿ ಸಮಾನ ಜವಾಬ್ದಾರಿ ವಹಿಸುವ ಕಂದಾಯ ಇಲಾಖೆಗೆ ಪೂರ್ಣ ಜವಾಬ್ದಾರಿ ವಹಿಸಬೇಕು ಎಂದು ಸೂಚನೆ ನೀಡಲಾಯಿತು.

ಯಾವ ಕ್ರಮವೂ ಇಲ್ಲ!

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ರಸ್ತೆ ಬದಿಯಲ್ಲಿ ಚರಂಡಿ ಮುಚ್ಚಿರುವುದು, ಡಾಂಬರು, ಕಾಂಕ್ರೀಟ್ ಅಗೆದಲ್ಲಿ, ಪೈಪ್ ಅಳವಡಿಸಿದಲ್ಲಿ ಗಟ್ಟಿಗೊಳಿಸದೆ ತೆರಳಿರುವ ಬಗ್ಗೆ ಮಾತುಕತೆಗಳು ನಡೆದಿದೆಯಾದರೂ ಇದನ್ನು ಗುತ್ತಿಗೆ ವಹಿಸಿದವರು ಸರಿಯಾಗಿ ನಿರ್ವಹಿಸಬೇಕೆಂಬ ಯಾವ ಆದೇಶವನ್ನೂ ಮಾಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಕಾಟಾಚಾರದ ಭೇಟಿ, ಸಭೆ

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್‌ಲೈನ್ ಕಾಮಗಾರಿಯಿಂದ ನಿತ್ಯ ಜನರಿಗೆ ಸಮಸ್ಯೆಯಾಗುತ್ತಿದ್ದು, ಇದರ ಬಗ್ಗೆ ಯಾವೊಂದು ಸೂಚನೆಗಳನ್ನಾಗಲಿ, ಪರಿಶೀಲನೆಯನ್ನಾಗಲೀ ಬೆಂಗಳೂರಿನಿಂದ ಆಗಮಿಸಿದ ನಗರಾಭಿವೃದ್ಧಿ ಜಂಟಿ ಕಾರ್ಯದರ್ಶಿ ಎಚ್.ಕೆ.ಕೃಷ್ಣಮೂರ್ತಿ ಮಾಡಿಲ್ಲ. ಅಽಕಾರಿಗಳಿಂದ ಸ್ಥಳದಲ್ಲಾಗುತ್ತಿರುವ ಸಮಸ್ಯೆ ಬಗ್ಗೆಯೂ ಕೇಳುವ ಗೋಜಿಗೆ ಹೋಗಿಲ್ಲ. ಒಂದು ಗಂಟೆ ಕಾಟಾಚಾರಕ್ಕೆ ಸಭೆ ನಡೆಸಿ ತೆರಳಲು ಸರ್ಕಾರದ ಸಾವಿರಾರು ರೂ. ಹಣ ಪೋಲು ಮಾಡುವ ಅಗತ್ಯವಿದೆಯಾ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net