22ಕ್ಕೆ ತಾಲೂಕು ಮಟ್ಟದ ವಿಪ್ರ ಮಹಿಳಾ ಸಮಾವೇಶ

19sri-1
Published on

ಶೃಂಗೇರಿ: ತಾಲೂಕು ಮಟ್ಟದ ಪ್ರಥಮ ವಿಪ್ರ ಮಹಿಳಾ ಸಮಾವೇಶ 22ರಂದು ರಾಜಾನಗರದ ಶ್ರೀವಿದ್ಯಾಭಾರತೀ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ತಾಲೂಕು ಬ್ರಾಹ್ಮಣ ಮಹಿಳಾ ಘಟಕದ ಅಧ್ಯಕ್ಷೆ ಕವನ.ಬಿ.ಶಾಮಸುಂದರ್ ಹೇಳಿದರು.

ತಾಲೂಕು ಬ್ರಾಹ್ಮಣ ಮಹಾಸಭಾ ಮತ್ತು ಮಹಿಳಾ ಘಟಕ ಜಂಟಿಯಾಗಿ ಸೋಮವಾರ ಆಯೋಜಿಸಿದ್ದ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈಗಾಗಲೇ ಸಮಾವೇಶದ ಪೂರ್ವಭಾವಿಯಾಗಿ ಮಹಿಳೆಯರಿಗೆ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ. ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಶಾಂತಾಕುಮಾರಿ ಸಮ್ಮೇಳನವದ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ರಾಜ್ಯಬ್ರಾಹ್ಮಣ ಮಹಾಸಭಾದ ಪದಾಧಿಕಾರಿ ರಾಘವೇಂದ್ರ ಭಟ್, ಶ್ರೀ ಮಹಾಬಲರಾವ್, ಸುಮಾ ಪ್ರಸಾದ್, ಕಿರುತೆರೆ ನಟಿ ವಿದ್ಯಾಚಿದಂಬರ ಶಾಸ್ತ್ರಿ ಭಾಗವಹಿಸಲಿದ್ದಾರೆ.

ನಂತರ ನಡೆಯುವ ಗೋಷ್ಠಿಯಲ್ಲಿ ಮಹಿಳೆ ಮತ್ತು ಧಾರ್ಮಿಕ ಆಚರಣೆ ಬಗ್ಗೆ ಸುಜಿತ್‌ರಾವ್, ಮಹಿಳೆ ಮತ್ತು ಔದ್ಯೋಗಿಕ ಸವಾಲು ಎಂಬ ಗೋಷ್ಠಿಯಲ್ಲಿ ಬೆಂಗಳೂರಿನ ಡಾ.ಅರುಣಾ ಮತ್ತು ಮಹಿಳೆ ಮತ್ತು ಕೌಟುಂಬಿಕ ಸವಾಲು ಬಗ್ಗೆ ಜಿ.ವಿ.ರಾಜೇಶ್ವರಿ ಮಾತನಾಡಲಿದ್ದಾರೆ ಎಂದರು.

ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜಿ.ಎಂ.ಸತೀಶ್ ಮಾತನಾಡಿ, 23 ರಂದು ಲಕ್ಷ ಗಾಯತ್ರಿ ಹೋಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಜಗದ್ಗುರುಗಳ ಆಪ್ತ ಸಹಾಯಕ ಶಂ.ನ.ಕೃಷ್ಣಮೂರ್ತಿಯವರನ್ನು ಗೌರವಿಸಲಾಗುತ್ತದೆ ಎಂದರು.

ತಾಲೂಕು ಬ್ರಾಹ್ಮಣ ಮಹಿಳಾ ಘಟಕದ ಪದಾಧಿಕಾರಿಗಳಾದ ನಾಗಮಣಿ, ಕಲಾ ರಮೇಶ್, ಸುಧಾ ರಾಜಶೇಖರ್, ಸುಮಂಗಲಾನಂದ ಸ್ವಾಮಿ, ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸತೀಶ್, ಪ್ರಧಾನ ಕಾರ್ಯದರ್ಶಿ ಬಿ.ಎಲ್.ರವಿಕುಮಾರ್, ಪದಾಧಿಕಾರಿಗಳಾದ ಮಹಾಬಲ ಭೀಡೆ, ಎ.ಎಂ.ಶ್ರೀಧರರಾವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net