ರಿಸಲ್ಟ್​ನಲ್ಲಿ ಸೇಡಂ ಟಾಪ್ ಸ್ಥಾನದಲ್ಲಿರಲಿ

16-SDMDEC-02
ಸೇಡಂನಲ್ಲಿ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಮಾರಂಭವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಉದ್ಘಾಟಿಸಿದರು. ಬಸವರಾಜ ಪಾಟೀಲ್ ಊಡಗಿ, ಚನ್ನಪ್ಪ ರಾಯಣ್ಣವರ್, ಮಾರುತಿ ಹುಜರಾತಿ, ಶಿವಶಂಕ್ರಯ್ಯಸ್ವಾಮಿ, ಬಸವರಾಜ ಸಾಗರ ಇತರರಿದ್ದರು.
Published on

ಸೇಡಂ: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಯತ್ತ ಆಕರ್ಷಿಸುವ ನಿಟ್ಟಿನಲ್ಲಿ ಸರ್ಕಾರ ಹತ್ತಾರು ಯೋಜನೆಗಳನ್ನು ಹಾಕಿಕೊಂಡಿದ್ದು, ಅವುಗಳನ್ನು ಸಮರ್ಪಕವಾಗಿ ಜಾರಿ ತರಲು ಅಧಿಕಾರಿಗಳು ಹಾಗೂ ಶಿಕ್ಷಕರು ಶ್ರಮಿಸಬೇಕಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಕರೆ ನೀಡಿದರು.

ಸುವರ್ಣ ಕರ್ನಾಟಕ ಭವನದಲ್ಲಿ ವಾಸವಾದತ್ತಾ, ರಾಜಶ್ರೀ ಸಿಮೆಂಟ್, ಶಾಲಾ ಶಿಕ್ಷಣ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಹೊರಹಾಕಲು ಪ್ರತಿಭಾ ಕಾರಂಜಿ ಹೆಸರಿನಡಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ ವೇದಿಕೆ ಕಲ್ಪಿಸಲಾಗುತ್ತಿದೆ ಎಂದರು.

ಸರ್ಕಾರಿ ಶಾಲೆ ಮಕ್ಕಳಿಗೆ ಬಿಸಿಯೂಟ, ಸಮವಸ್ತ್ರ ಸೇರಿ ಇನ್ನಿತರ ಸೌಕರ್ಯ ಕಲ್ಪಿಸುತ್ತಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಗ್ರಾಮ, ಶಾಲೆ ಹಾಗೂ ನಿಮ್ಮ ಪಾಲಕರು ಹೆಮ್ಮೆಪಡುವಂತ ಸಾಧನೆ ಮಾಡಬೇಕು. ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸೇಡಂ ತಾಲೂಕು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿರಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಸೂಚನೆ ನೀಡಿದರು.

ಶಿಕ್ಷಕರ ಕಲ್ಯಾಣ ನಿಧಿಯಿಂದ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ತಲಾ ೫ ಸಾವಿರ ರೂ. ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ತೋಟಗಾರಿಕೆ ಮಹಾಮಂಡಳಿ ಮಾಜಿ ಅಧ್ಯಕ್ಷ ಬಸವರಾಜ ಪಾಟೀಲ್ ಊಡಗಿ, ತಾಪಂ ಇಒ ಚನ್ನಪ್ಪ ರಾಯಣ್ಣವರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಶಂಕರಯ್ಯಸ್ವಾಮಿ ಇಮಡಾಪುರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಸಾಗರ, ಆರೋಗ್ಯ ಅಧಿಕಾರಿ ಡಾ.ಸಂಜಯ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ್, ಪ್ರಮುಖರಾದ ಅಶೋಕರೆಡ್ಡಿ ಚಿಲುಮೆ, ಅನಿಲಕುಮಾರ ಸುಭೆದಾರ, ಸಕ್ರೆಪ್ಪ ಹಂದರಕಿ, ಮುನಾಫ್ ಪಟೇಲ್ ಇತರರಿದ್ದರು.

ಸರಸ್ವತಿ ವಿದ್ಯಾ ಮಂದಿರದ ವಿದ್ಯಾರ್ಥಿನಿ ಆರಾಧ್ಯ ವೆಂಕಟಪ್ಪ ಭರತನಾಟ್ಯ ಪ್ರದರ್ಶಿಸಿದರು. ಆದರ್ಶ ವಿದ್ಯಾಲಯದ ಮಕ್ಕಳು ಪ್ರಾರ್ಥಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಾರುತಿ ಹಜರಾತಿ ಸ್ವಾಗತಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಶಂಕರಲಿಂಗಪ್ಪ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ನಿರೂಪಣೆ ಮಾಡಿದರು. ವಿರೂಪಾಕ್ಷ ಸಿಂಪಿಗೇರ ವಂದಿಸಿದರು.

ಸೇಡಂ ತಾಲೂಕಿನಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಶಿಕ್ಷಕರು ಕೂಡಲೇ ಕಾರ್ಯೋನ್ಮುಖರಾಗಿ ಸ್ಕೂಲ್‌ನಿಂದ ಹೊರಗುಳಿದ ವಿದುರ್ಥಿಗಳನ್ನು ಗುರುತಿಸಿ, ಮರಳಿ ಶಾಲೆಗೆ ಸೇರಿಸುವ ಪ್ರಯತ್ನ ಮಾಡಬೇಕು. ಪಾಲಕ, ಪೋಷಕರು ಸಹ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿ, ಶಿಕ್ಷಿತರನ್ನಾಗಿ ಮಾಡಬೇಕು.
| ಡಾ.ಶರಣಪ್ರಕಾಶ ಪಾಟೀಲ್ ವೈದ್ಯಕೀಯ ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net