ಕಡಬ: ಪೊಲೀಸ್ ಇಲಾಖೆ ಮತ್ತು ಕಡಬದ ಸೇಂಟ್ ಆ್ಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಕಡಬ ತಾಲೂಕು ವ್ಯಾಪ್ತಿಯ ಶಾಲೆಗಳ 10ನೇ ತರಗತಿಯ ವಿದ್ಯಾರ್ಥಿಗಳಿಗೆ ನ.12ರಂದು ಕಡಬದ ಸೇಂಟ್ ಜೋಕಿಮ್ ಸಭಾಂಗಣದಲ್ಲಿ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ.
ಪುತ್ತೂರು ನಗರ ಪೊಲೀಸ್ ಠಾಣೆಯ ಉಪನಿರೀಕ್ಷಕ ಆಂಜನೇಯ ರೆಡ್ಡಿ ಸ್ಪರ್ಧಾ ಕಾರ್ಯಕ್ರಮ ನಡೆಸಿಕೊಡಲಿದ್ದು, ಒಂದು ತಂಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶ ನೀಡಲಾಗಿದೆ.
ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ಲಭಿಸಲಿದ್ದು, ಪ್ರಥಮ 5 ಸಾವಿರ ರೂ. ನಗದು, ದ್ವಿತೀಯ 4 ಸಾವಿರ ರೂ. ನಗದು, ತೃತೀಯ 3 ಸಾವಿರ ರೂ. ನಗದು ಹಾಗೂ ಚತುರ್ಥ 2 ಸಾವಿರ ರೂ. ನಗದು ಬಹುಮಾನ ನಿಗದಿ ಪಡಿಸಲಾಗಿದೆ. 10ನೇ ತರಗತಿಯ ಪಠ್ಯಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಪರೀಕ್ಷೆಗೆ ಸಿದ್ಧರಾಗಲು ಈ ರಸಪ್ರಶ್ನೆ ಸ್ಪರ್ಧೆ ಸಹಕಾರಿಯಾಗಲಿದ್ದು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಂಘಟಕರು ವಿನಂತಿಸಿದ್ದಾರೆ.