

ಮೂಡುಬಿದಿರೆ: ಗ್ರಾಮೀಣಮಟ್ಟದಲ್ಲಿ ಮ್ಯಾಟ್ ಕಬಡ್ಡಿ ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಗ್ರಾಮೀಣಮಟ್ಟದ ಶಾಲೆಗಳಲ್ಲಿ ಮ್ಯಾಟ್ ಕಬಡ್ಡಿಯ ತರಬೇತಿ ನಡೆಯುವಂತಾಗಬೇಕು ಎಂದು ದ.ಕ. ಅಮೆಚೂರ್ ಕಬಡ್ಡಿ ಅಸೋಶಿಯೇಷನ್‌ನ ಅಧ್ಯಕ್ಷ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ದ.ಕ. ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮೂಡುಬಿದಿರೆ ಹಾಗೂ ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಶಾಲೆಯ ಆವರಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ತಾಲೂಕುಮಟ್ಟದ ಕಬಡ್ಡಿ ಪಂದ್ಯಾಟ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲೆಯ ಸಂಚಾಲಕ ಕಡಂದಲೆಗುತ್ತು ಸುದರ್ಶನ್ ಶೆಟ್ಟಿ ಪಂದ್ಯಾಟ ಉದ್ಘಾಟಿಸಿದರು. ಪಾಲಡ್ಕ ಗ್ರಾಪಂ ಅಧ್ಯಕ್ಷೆ ಅಮಿತಾ ನಾಯ್ಕ ಕ್ರೀಡಾಂಗಣ ಉದ್ಘಾಟಿಸಿದರು.
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ, ವಕೀಲ ಕೆ.ಆರ್.ಪಂಡಿತ್ ಅಧ್ಯಕ್ಷತೆ ವಹಿಸಿ, ಕಬಡ್ಡಿ ಎನ್ನುವುದು ಶಕ್ತಿ ಮಾತ್ರವಲ್ಲ, ಯುಕ್ತಿಯ ಕ್ರೀಡೆ. ದೇಶಿಯ ಕ್ರೀಡೆ ಆಯೋಜನೆಗೆ ಊರಿನವರು ಸಹಕಾರ ನೀಡಿರುವುದು ಅಭಿನಂದನಾರ್ಹ ಎಂದರು.
ಕೆಎಂಎಫ್ ನಿರ್ದೇಶಕ ಸುಚರಿತ ಶೆಟ್ಟಿ, ವಕೀಲ ಶಾಂತಿಪ್ರಸಾದ್ ಹೆಗ್ಡೆ, ಪಾಲಡ್ಕ ಗ್ರಾಪಂ ಸದಸ್ಯರಾದ ಜಗದೀಶ್ ಕೋಟ್ಯಾನ್ ತೊಂದಡ್ಪು, ಕಾಂತಿ ಶೆಟ್ಟಿ, ಅಮಿತಾ ನಾಗೇಶ್, ಅಮಿತಾ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಂದ್ರ ಭಟ್, ಕಡಂದಲೆ ದೇವರಾಜು ಅರಸು ಹಿಂದುಳಿದ ವರ್ಗದ ಹಾಸ್ಟೆಲ್ ಮೇಲ್ವಿಚಾರಕ ಅರುಣ್ ಕುಮಾರ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶಿವಾನಂದ ಕಾಯ್ಕಿಣಿ, ನವೀನ್ ಪುತ್ರನ್, ಗ್ರೇಸಿ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ರಶ್ಮಿ ರಾಜೇಶ್, ಮುಖ್ಯಶಿಕ್ಷಕ ದಿನಾಕರ್ ಕುಂಭಾಶಿ, ದೈಹಿಕ ಶಿಕ್ಷಣ ಶಿಕ್ಷಕ ರೂಪಿತ್ ರೈ ಉಪಸ್ಥಿತರಿದ್ದರು. ಸುಧಾಕರ ಪೊಸ್ರಾಲ್ ನಿರೂಪಿಸಿದರು.