

ಮಂಡ್ಯ: ಧಾರಾವಾಹಿಗಳು ಮನೆಯಲ್ಲಿನ ಜಗಳವನ್ನೇ ತೋರಿಸುತ್ತಿವೆ. ಇದರಿಂದ ಕುಟುಂಬದಲ್ಲಿನ ಶಾಂತಿ, ನೆಮ್ಮದಿ ಹಾಳು ಮಾಡುತ್ತವೆ ಎಂದು ಬಸವೇಶ್ವರ ಆಗ್ರೋ ರೈಸ್ ಇಂಡಸ್ಟ್ರೀಸ್ ಮಾಲೀಕ ಎಸ್.ಸಿ.ಬಸವರಾಜು ಸಂಪಹಳ್ಳಿ ಹೇಳಿದರು.
ನಗರದ ಗಾಂಧಿಭವನದಲ್ಲಿ ಮಲೆಮಹದೇಶ್ವರ ಜಾನಪದ, ಸುಗಮ ಸಂಗೀತ ಅಕಾಡೆಮಿ ತಂಡ(ಹೆಮ್ಮಿಗೆ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಜಾನಪದ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗಗಳಲ್ಲಿ ಜಾನಪದ ಹುಟ್ಟಿಕೊಂಡಿದೆ ಹೇಗೆಂದರೆ ನಾಟಿ ಮಾಡುವ ಸಮಯ, ರಾಗಿ ಬೀಸುವಾಗ, ಸೋಬಾನೆ ಪದಗಳನ್ನು ಜಾನಪದ ಶೈಲಿಯಲ್ಲಿ ಹಾಡುವ ಮೂಲಕ ಬಾಯಿಂದ ಬಾಯಿಗೆ ಬಂದು ಜನಪ್ರಿಯವಾಯಿತು ಎಂದರು.
ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುರೇಶ್ ಮಾತನಾಡಿ, ಜಾನಪದ ಹಾಡುಗಳು ನಶಿಸುತ್ತಿವೆ. ಅವುಗಳನ್ನು ಶಾಲಾ ಮತ್ತು ಕಾಲೇಜು ಹಂತದಲ್ಲಿ ಉಳಿಸಿ ಬೆಳೆಸುವ ಕೆಲಸವನ್ನು ಮಾಡಬೇಕು. ಇದು ನಮ್ಮ ನಾಡಿನ ಸಂಸ್ಕೃತಿಯು ಹೌದು ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ ಉದ್ಘಾಟಿಸಿದರು. ಸೂನಹಗಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಶಿವಪ್ರಸಾದ್, ಜಾನಪದ ಕಲಾವಿದ ಒಕ್ಕೂಟದ ಮೈಸೂರು ವಿಭಾಗ ಅಧ್ಯಕ್ಷ ಆರ್.ಕೆ.ಸ್ವಾಮಿ, ಅಕಾಡೆಮಿ ಅಧ್ಯಕ್ಷೆ ದೇವೀರಮ್ಮ, ಕಾರ್ಯದರ್ಶಿ ಎಚ್.ಎಂ.ಮಹದೇವು ಇತರರಿದ್ದರು.