

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ರಾಜ್ಯ ಸರ್ಕಾರದ ಪ್ರತಿ ಯೋಜನೆಗಳು ಸಮಾಜದ ಕಟ್ಟ ಕಡೆಯ ಪ್ರಜೆಗೂ ತಲುಪಬೇಕು. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಗಮನಹರಿಸಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸೂಚಿಸಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿ ಹಳೇ ಬಸ್ ನಿಲ್ದಾಣದ ಬಳಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ತಾಲೂಕುಮಟ್ಟದ ಸಮಾವೇಶದಲ್ಲಿ ಮಾತನಾಡಿದರು. ಸರ್ಕಾರ ಜನಪರವಾಗಿದ್ದು, ನುಡಿದಂತೆ ನಡೆಯುತ್ತಿದೆ. ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಗ್ಯಾರಂಟಿಗಳನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಅನುಷ್ಠಾನ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ರಾಷ್ಟ್ರದಲ್ಲಿ ಎಲ್ಲ ಧರ್ಮದ ವ್ಯಕ್ತಿಗಳು ನೆಮ್ಮದಿ, ಶಾಂತಿ ಜತೆಗೆ ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿಯಾದಾಗ ಮಾತ್ರ ಅದು ರಾಮರಾಜ್ಯವಾಗಲಿದೆ. ಇದು ಗಾಂಧಿ ಕಂಡ ಕನಸಾಗಿತ್ತು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಎಲ್ಲ ಕುಟುಂಬ ಅಭಿವೃದ್ಧಿ ಕಾಣಬೇಕು ಎಂಬ ಕಾರಣದಿಂದ ಗ್ಯಾರಂಟಿ ಜಾರಿಗೆ ತಂದಿದ್ದೇವೆ. ಪ್ರತಿಯೊಬ್ಬರಿಗೂ ಸೌಲಭ್ಯ ದೊರಕಬೇಕು. ಫಲಾನುಭವಿಗಳು ಯಾರೂ ವಂಚಿತರಾಗಬಾರದು ಎಂದರು.
ಸೌಲಭ್ಯ ಸಿಗದವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ನೋಂದಾಯಿಸಿಕೊಳ್ಳಿ, ಸೌಲಭ್ಯ ತಲುಪಿಸಲು ಜಿಲ್ಲಾಡಳಿತ ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳಿದರು.
ಹಸಿವುಮುಕ್ತ ರಾಜ್ಯ
ಹಿಂದಿನ ಯುಪಿಎ ಸರ್ಕಾರದ ಅವಧಿಯ ಮನಮೋಹನ್‌ಸಿಂಗ್ ನೇತೃತ್ವದಲ್ಲಿ ಮೊಟ್ಟ ಮೊದಲ ಬಾರಿಗೆ ಆಹಾರ ಭದ್ರತೆ ಕಾಯ್ದೆ ಜಾರಿ ಮಾಡಲಾಯಿತು. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದು10 ಕೆಜಿ ಅಕ್ಕಿ ನೀಡುವ ಮಹತ್ತರ ಕೆಲಸ ಮಾಡಲಾಯಿತು. ರಾಜ್ಯದಲ್ಲಿ ಯಾರೂ ಹಸಿವಿನಿಂದ ಇರಬಾರದು ಹಾಗೂ ಹಸಿವುಮುಕ್ತ ರಾಜ್ಯವನ್ನಾಗಿ ಮಾಡಬೇಕು ಎಂಬ ಕಾರಣದಿಂದ ಈ ಯೋಜನೆಯನ್ನು ಗ್ಯಾರಂಟಿ ಮೂಲಕ ಬಡವರಿಗೆ ತಲುಪಿಸುತ್ತಿದ್ದೇವೆ ಎಂದು ಸಚಿವರು ಹೇಳಿದರು