ನಮ್ಮ ನಡಿಗೆ ಪಂಚಾಯಿತಿ ಕಡೆಗೆ ಕಾರ್ಯಾಗಾರ

udp-2-ramesh kanchan
Published on

ಉಡುಪಿ: ಬಡಜನರ ಜೀವನ ಮಟ್ಟ ಸುಧಾರಣೆಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮಹತ್ವಪೂರ್ಣ ಪಂಚ ಗ್ಯಾರಂಟಿ ಯೋಜನೆಗಳನ್ನು ಪಂಚಾಯಿತಿ ಮಟ್ಟದಲ್ಲಿ ಜನರಿಗೆ ತಲುಪಿಸುವ ಉದ್ದೇಶದಿಂದ ನಮ್ಮ ನಡಿಗೆ ಪಂಚಾಯಿತಿ ಕಡೆಗೆ ಎಂಬ ಕಾರ್ಯಕ್ರಮ ಆಯೋಜಿಸಿ, ಯೋಜನೆ ಕುರಿತು ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗುವುದು ಎಂದು ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಮೇಶ್​ ಕಾಂಚನ್​ ತಿಳಿಸಿದರು.

ತಾಪಂ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ವ್ಯವಸ್ಥಿತವಾಗಿ ಅನುಷ್ಠಾನ ಮಾಡಲಾಗುತ್ತಿದೆ. ತಾಲೂಕು ಮಟ್ಟದಲ್ಲಿಯೂ ಸಹ ಇನ್ನಷ್ಟು ಪರಿಣಾಮಕಾರಿಯಾಗಿ ಬಡ ಜನರಿಗೆ ಯೋಜನೆಗಳು ತಲುಪುವಂತೆ ನೋಡಿಕೊಳ್ಳಬೇಕು. ಜನಸಾಮಾನ್ಯರು ಯಾವುದೇ ಯೋಜನೆಗಳ ಲಾಭ ಪಡೆಯಲು ಮುಂದೆ ಬಂದಾಗ ಅವರನ್ನು ಸತಾಯಿಸದೇ ಕೆಲಸ ಕಾರ್ಯಗಳನ್ನು ಆದ್ಯತೆಯ ಮೇಲೆ ಮಾಡಿಕೊಡಲು ಕ್ರಮವಹಿಸಬೇಕು. ಸ್ಥಳಿಯ ಮಟ್ಟದಲ್ಲಿ ಬಗೆಹರಿಸಲು ಸಾಧ್ಯವಿಲ್ಲದ ಅರ್ಜಿಗಳ ಪಟ್ಟಿ ನೀಡಿದ್ದಲ್ಲಿ, ಅಂತಹ ಅರ್ಜಿಗಳನ್ನು ಜಿಲ್ಲಾ ಮಟ್ಟದ ಸಮಿತಿಯ ಮೂಲಕ ರಾಜ್ಯ ಸಮಿತಿಗೆ ಸಲ್ಲಿಸಲಾಗುವುದು ಎಂದರು.

ಹೆರ್ಗಾ ಭಾಗದಲ್ಲಿ ಸಂಚರಿಸುತ್ತಿದ್ದ ಬಸ್​ ಕಾರ್ಯಾಚರಣೆ ನಿಲ್ಲಿಸಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿದ್ದು, ಸೋಮವಾರದಿಂದ ಬಸ್​ಗಳು ಪುನ@ ಸಂಚಾರ ನಡೆಸುತ್ತಿವೆ. ಬಡಗುಬೆಟ್ಟು ಮತ್ತಿತರ ಕಡೆಗಳಲ್ಲಿ ಸಂಚಾರ ನಿಲ್ಲಿಸಿರುವ ಬಸ್​ಗಳು ಪುನರ್​ ಕಾರ್ಯಾಚರಣೆ ನಡೆಸಲು ಅಧಿಕಾರಿಗಳು ಕ್ರಮವಹಿಸಬೇಕು. ತಾಲೂಕು ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ನಿಗಮದ ಬಸ್​ಗಳ ಮಾಹಿತಿ ನೀಡುವಂತೆ ಸೂಚಿಸಿದರು.

ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಅಕ್ಕಿಯನ್ನು ಕಾಳಸಂತೆಯಲ್ಲಿ ಮಾರಾಟವಾಗದಂತೆ ನೋಡಿಕೊಳ್ಳಬೇಕು. ಪಡಿತರ ಅಂಗಡಿಯಿಂದ ಅಕ್ಕಿಯನ್ನು ಪಡೆದು ಅದನ್ನು ಬಳಸದೇ ಇತರರಿಗೆ ಮಾರಾಟ ಮಾಡಿದ್ದಲ್ಲಿ ಪಡಿತರ ವಿತರಿಸಲಾಗುವುದಿಲ್ಲ ಎಂಬ ಎಚ್ಚರಿಕೆಯನ್ನು ಪಡಿತರ ಅಂಗಡಿಯವರು ನೀಡಬೇಕು ಎಂದರು.

ಯುವನಿಧಿ ಯೋಜನೆಯಡಿ ಡಿಪ್ಲೋಮಾ ಅಭ್ಯರ್ಥಿಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸುವಾಗ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಇದನ್ನು ಆದ್ಯತೆಯ ಮೇಲೆ ಇತ್ಯರ್ಥಪಡಿಸಲು ಕ್ರಮ ವಹಿಸಬೇಕು ಎಂದರು. ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ವಿಜಯಾ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net