ಸಾರ್ವಜನಿಕರಿಗೆ ಅನುಕೂಲವಾಗುವ ಕೆಲಸ ನಿರ್ವಹಿಸಿ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

Taluk Committee Meeting Mandya
Published on

ಮಂಡ್ಯ: ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 50 ಕೋಟಿ ರೂ ಅನುದಾನ ನಿಗದಿಯಾಗಿದೆ. ಆದ್ದರಿಂದ ಸಾರ್ವಜನಿಕರಿಗೆ ಅನುಕೂಲವಂತಹ ಕೆಲಸ ನಿರ್ವಹಿಸಲು ಯೋಜನೆ ರೂಪಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ತಾಲೂಕು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಿಗದಿಯಾಗಿರುವ ಅನುದಾನಕ್ಕೆ ಆಯಾ ತಾಲೂಕು ವ್ಯಾಪ್ತಿಯ ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಯೋಜನೆ ರೂಪಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಲೂಕುವಾರು ಅಭಿವೃದ್ಧಿಗೊಳಿಸಬೇಕಾದ ಕಾಮಗಾರಿಗಳನ್ನು ಪರಿಶೀಲಿಸಿ ಸಂಪೂರ್ಣ ಮಾಹಿತಿಯನ್ನು 7 ದಿನದಲ್ಲಿ ಅಧಿಕಾರಿಗಳು ಸಲ್ಲಿಸಬೇಕು. ಸಲ್ಲಿಸಿದ ವರದಿಯನ್ನು ಜಿಲ್ಲಾ ಮಟ್ಟದ ಸಮಿತಿ ಮೂಲಕ ಅನುಮೋದನೆ ನಡೆಸಿ ಸರ್ಕಾರಕ್ಕೆ ನೀಡಲಾಗುವುದು. ನಿಗದಿಯಾಗಿರುವ ಅನುದಾನದಲ್ಲಿ ಶೇ.75ರಷ್ಟನ್ನು ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಹಾಗೂ ಇತರೆ ಇಲಾಖೆಗಳ ವ್ಯಾಪ್ತಿಯ ರಸ್ತೆ, ಸೇತುವೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಇನ್ನಿತರೆ ಮೂಲ ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆ ರೂಪಿಸಬೇಕು. ಉಳಿದ ಶೇ.25ರಷ್ಟು ಅನುದಾನದಲ್ಲಿ ಶಾಸಕರು ಸೂಚಿಸುವ ಸಮುದಾಯ ಭವನ, ಶಾಲೆ, ಅಂಗನವಾಡಿ ಹಾಗೂ ಇತರೆ ಕಾಮಗಾರಿ ಅಭಿವೃದ್ಧಿಗಳಿಗಾಗಿ ಅನುಷ್ಠಾನಗೊಳಿಸಬಹುದು. ಆದರೆ ಮುಖ್ಯವಾಗಿ ಯೋಜನೆ ರೂಪಿಸುವಾಗ ಸಾರ್ವಜನಿಕರಿಗೆ ಉಪಯುಕ್ತತೆಯನ್ನು ಖಾತ್ರಿ ಪಡಿಸಿಕೊಳ್ಳಬೇಕು. ಇಲಾಖೆಗಳಿಂದ ಮಾಹಿತಿ ಪಡೆದು ಕಾಮಗಾರಿಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಹರ್ಷ, ನಗರಸಭಾ ಆಯುಕ್ತೆ ಯು.ಪಿ.ಪಂಪಶ್ರೀ ಸೇರಿದಂತೆ ತಹಸೀಲ್ದಾರ್, ತಾಪಂ ಇಒ, ವಿವಿಧ ಇಲಾಖೆ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net