

ಅರಕೇರಾ: ನೂತನ ತಾಲೂಕು ಕೇಂದ್ರ ಅರಕೇರಾದಲ್ಲಿ ಅಗತ್ಯ ಸೌಕರ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್‌ಗೆ ಸ್ಥಳೀಯ ಪ್ರಮುಖರು ಗುರುವಾರ ಮನವಿ ಸಲ್ಲಿಸಿದರು.
ಜಿಪಂ ಮಾಜಿ ಸದಸ್ಯ ಡಾ.ಎಚ್.ಎ.ನಾಡಗೌಡ ಮಾತನಾಡಿ, ತಾಲೂಕಿನ ಹೋಬಳಿ ಕೇಂದ್ರಗಳ ರಚನೆಗೆ ಕ್ರಮ ವಹಿಸಿ, ಅಲ್ಲಿ ಸರ್ಕಾರಿ ಕಚೇರಿಗಳನ್ನು ಆರಂಭಿಸಬೇಕು. ಎಲ್ಲ ಸರ್ಕಾರಿ ಕಚೇರಿಗಳಿಗೆ ತಾಲೂಕು ಅರಕೇರಾ ಎಂದು ನಾಮಫಲಕ ಅಳವಡಿಸಬೇಕು. ಉಪನೋಂದಣಿ, ಕ್ಷೇತ್ರ ಶಿಕ್ಷಣಾಧಿಕಾರಿ, ಶಿಶು ಅಭಿವೃದ್ಧಿ ಯೋಜನೆ, ತಾಪಂ, ಆಹಾರ ನಿರೀಕ್ಷಕ ಸೇರಿ ವಿವಿಧ ಇಲಾಖೆಗಳ ಕಚೇರಿಗಳನ್ನು ಆರಂಭಿಸಬೇಕು ಎಂದು ಆಗ್ರಹಿಸಿದರು.
ತಾಲೂಕಿನ ದಾಖಲೆಗಳು, ಸರ್ಕಾರಿ ತಂತ್ರಾಂಶಗಳಲ್ಲಿ ಅರಕೇರಾ ತಾಲೂಕು ಎಂದು ನಮೂದಾಗಲು ಕ್ರಮವಹಿಸಬೇಕು.ತಾಲೂಕು ಕೇಂದ್ರಕ್ಕೆ ಪೊಲೀಸ್ ಠಾಣೆ ಮಂಜೂರು ಮಾಡಬೇಕು. ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಬೇಕು. ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿ ಅಥವಾ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮದ ಪ್ರಮುಖ ಕೆ.ಅನಂತರಾಜ ನಾಯಕ ಮಾತನಾಡಿ, ಅರಕೇರಾ ತಾಲೂಕು ಕೇಂದ್ರವಾಗಿ ಎರಡು ವರ್ಷಗಳಾಗಿವೆ. ತಹಸಿಲ್ ಕಚೇರಿಯನ್ನು ಮಾತ್ರ ತಾತ್ಕಾಲಿಕ ಕಟ್ಟಡದಲ್ಲಿ ಆರಂಭಿಸಲಾಗಿದೆ. ಉಳಿದಂತೆ ಕೆಲ ಸಿಬ್ಬಂದಿ ನಿಯೋಜಿಸಲಾಗಿದೆ. ತಹಸಿಲ್ ಕಚೇರಿಗೆ ಮಂಜೂರಾಗಿರುವ 28 ಹುದ್ದೆಗಳನ್ನು ಭರ್ತಿ ಮಾಡಬೇಕು. ತಹಸೀಲ್ದಾರ್ ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು. ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಸ್ಥಳ ಅಂತಿಮಗೊಳಿಸಿ ಟೆಂಡರ್ ಕರೆಯಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಮಹೇಶ ನಾಯಕ ಆಲ್ಕೋಡ, ಸೀತಾರಾಮ ಬಂಗಾರಬಂಡಿ ತಾಂಡ, ಹನುಂತ್ರಾಯ ನಾಯಕ ಕೊತ್ತದೊಡ್ಡಿ, ರಂಗಪ್ಪ ನಾಯಕ ಪಿಲಿಗುಂಡ, ಆಂಜನೇಯ ನಾಗಡದಿನ್ನಿ, ಸಂಗಮೇಶ ಬಂಡೆಗುಡ್ಡ, ವೆಂಕಟೇಶ ಪೂಜಾರಿ ಬುದ್ದಿನ್ನಿ, ಅಶೋಕ ಜಾಗಟಗಲ್, ನಾಗರಾಜ ದೇವರಮನಿ, ಬಂಡೇಶ ನಾಯಕ ರೇಕಲಮರಡಿ, ಶಿವರಾಜ ಮುಕ್ಕಲಗುಡ್ಡ ಇತರರಿದ್ದರು.