ರಾಜ್ಯ ಸರ್ಕಾರದ ಬೆಲೆ ನೀತಿಗೆ ವಿರೋಧ

07 hnl
Published on

ಹೊನ್ನಾಳಿ: ರಾಜ್ಯ ಕಾಂಗ್ರೆಸ್ ಸರ್ಕಾರ ದಿನೋಪಯೋಗಿ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ತಾಲೂಕು ಬಿಜೆಪಿ ಘಟಕ ಶನಿವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

ಪ್ರತಿಭಟನಾ ಮೆರವಣಿಗೆ ಪಟ್ಟಣದ ಸಂಗೊಳಿರಾಯಣ್ಣ ವೃತ್ತದಿಂದ ತಾಲೂಕು ಕಚೇರಿವರೆಗೆ ಸಾಗಿತು.

ಈ ವೇಳೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಕಾಂಗ್ರೆಸ್ ಸರ್ಕಾರ ಹಾಲು, ಮೊಸರು, ಡೀಸೆಲ್, ಬಸ್ ದರ ಹೀಗೆ ಹಲವಾರು ವಸ್ತುಗಳ ಬೆಲೆ ಏರಿಕೆ ಮಾಡಿದೆ. ಐದು ಗ್ಯಾರಂಟಿ ಈಡೇರಿಸಲು ಬೆಲೆ ಏರಿಕೆ ಬರೆ ಎಳೆದಿದೆ ಎಂದು ತರಾಟೆ ತೆಗೆದುಕೊಂಡರು.

ಅಲ್ಪಸಂಖ್ಯಾತರನ್ನು ಓಲೈಸಲು ಗುತ್ತಿಗೆಯಲ್ಲಿ ಶೇ.4 ರಷ್ಟು ಮೀಸಲಾತಿ ನೀಡಿ ಸಂವಿಧಾನಕ್ಕೆ ಅಪಚಾರ ಮಾಡಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ಬಳಸಿದೆ ಎಂದು ಆರೋಪಿಸಿದರು.

ಪ್ರಕರಣ ದಾಖಲಿಸಿ: ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕ ಮಂಥರ್​ಗೌಡ ಹಾಗೂ ಇತರರ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಕೊಡಗು ಜಿಲ್ಲೆಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಈ ಇಬ್ಬರು ಶಾಸಕರನ್ನು ಬಂಧಿಸಬೇಕು ಎಂದು ಗೃಹ ಸಚಿವರಿಗೆ ಆಗ್ರಹಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಅರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಸುರೇಶ್, ಕುಬೇರಪ್ಪ ಮಾತನಾಡಿದರು.

ಮಾನವ ಸರಪಳಿ ಮಾಡಿದ್ದರಿಂದ ಅರ್ಧಗಂಟೆಗೂ ಹೆಚ್ಚು ಸಮಯ ಸಂಚಾರಕ್ಕೆ ಅಡೆತಡೆಯಾಯಿತು.

ಬಿಜೆಪಿ ಮುಖಂಡರಾದ ನೆಲಹೊನ್ನೆ ಮಂಜುನಾಥ್, ಶಿವಾನಂದ್, ಮಾರುತಿನಾಯ್್ಕ ರವಿಕುಮಾರ್, ರಮೇಶ್​ಗೌಡ, ಉಮೇಶ್, ರಾಜು ಪಲ್ಲವಿ, ಅನಿಲ್ ಕುಂದುರು, ರಂಗನಾಥ್ ಕುಳಗಟ್ಟೆ, ಕೆ.ವಿ. ಶ್ರೀಧರ್ ಹಾಗೂ ನೂರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net