

ವೆಂಕಟರಾಜು ಎಸ್. ದೊಡ್ಡಬಳ್ಳಾಪುರ: ತಾಲೂಕು ಆಡಳಿತ ಹಾಗೂ ಉಪ ವಿಭಾಗಾಧಿಕಾರಿ ಕಚೇರಿಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಭೇಟಿ ನೀಡಿದ ಬಳಿಕ ಎಚ್ಚೆತ್ತುಕೊಂಡಿರುವ ಮೇಲಧಿಕಾರಿಗಳು, ಎಸಿ ಕಚೇರಿಗೆ ಹೈಟೆಕ್ ಸಿಸಿಟಿವಿ ಅಳವಡಿಸಿ, ಇಲಾಖೆಯಲ್ಲಿ ಕೇಳಿ ಬಂದಿರುವ ಲಂಚಾವತಾರಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ಸಚಿವ ಕೃಷ್ಣಬೈರೇಗೌಡ ತಾಲೂಕು ಕಚೇರಿ ಹಾಗೂ ಉಪ ವಿಭಾಗಾಧಿಕಾರಿ ಕಚೇರಿಗೆ ಇತ್ತೀಚೆಗೆ(ಡಿ.26) ಭೇಟಿ ನೀಡಿದಾಗ ಖಾಲಿ ಕುರ್ಚಿ, ಸಮಯ ಪಾಲನೆ ಮಾಡದ ಅಧಿಕಾರಿಗಳು, ಕೊಠಡಿಗಳಿಗೆ ಬೀಗ ಹಾಕಿರುವುದನ್ನು ಕಂಡು ಸಿಬ್ಬಂದಿಯನ್ನು ತರಾಟೆ ತೆಗೆದುಕೊಂಡಿದ್ದಲ್ಲದೇ, ಅವ್ಯವ್ಯವಸ್ಥೆ ಸರಿಪಡಿಸುವಂತೆ ತಾಕೀತು ಮಾಡಿದ್ದರು. ಇದಾದ ಬಳಿಕ ಆಡಳಿತದಲ್ಲಿ ಸಾಕಷ್ಟು ಬದಲಾವಣೆ ಗೋಚರಿಸುತ್ತಿವೆ. ಸಮಯ ಪರಿಪಾಲನೆ, ಸಾರ್ವಜನಿಕರ ಭೇಟಿ, ಅಧಿಕಾರಿಗಳ ಗೈರಿಗೆ ಕಡಿವಾಣ ಬಿದ್ದಿದೆ. ಅಲ್ಲದೆ ಉಪವಿಭಾಗಾಧಿಕಾರಿಗಳ ಕಚೇರಿ ಹೈಟೆಕ್ ಸಿಸಿ ಕ್ಯಾಮರಾ ಕಣ್ಗಾವಲಿಗೆ ಒಳಪಟ್ಟಿದ್ದು,
ಲಂಚಾವತಾರ ಕ್ಷೀಣಿಸುತ್ತಿದೆ. ರೈತರು, ಸಾರ್ವಜನಿಕರ ಅಲೆದಾಟಕ್ಕೂ ಕಡಿವಾಣ ಬೀಳುತ್ತಿದ್ದು, ಅಧಿಕಾರಿಗಳ ಕಾರ್ಯಕ್ಷಮತೆಗೆ ವೇಗ ಸಿಗುವ ನಿರೀಕ್ಷೆ ಮೂಡಿದೆ.
ಆಡಳಿತಕ್ಕೆ ಮೇಜರ್ ಸರ್ಜರಿ: ಸಚಿವರ ಭೇಟಿ ಬಳಿಕ ಉಪವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ ಕೆಲಸದಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಸಿಬ್ಬಂದಿಯ ಸ್ಥಾನ ಪಲ್ಲಟ ಮಾಡಿ ಕಾರ್ಯವ್ಯಾಪ್ತಿ ಬದಲಾಯಿಸಲಾಗಿದೆ. ಈ ಮೂಲಕ ಫೈಲ್‌ಗಳ ಶೀಘ್ರ ವಿಲೇವಾರಿಗೆ ಕ್ರಮವಹಿಸಲಾಗಿದೆ. ಸಮಯ ಪರಿಪಾಲನೆಗೂ ಒತ್ತು ನೀಡಲಾಗಿದ್ದು, ಬಹುತೇಕರು ಬೆಳಗ್ಗೆ 10ಗಂಟೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಸಾರ್ವಜನಿಕರ ಭೇಟಿಗೆ ಲಭ್ಯರಾಗಿದ್ದಾರೆ.
ಕಾರ್ಯವೈಖರಿ ಮೇಲೆ ನಿಗಾ: ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಹಲವು ವರ್ಷಗಳಿಂದ ಕಣ್ಣಿದ್ದೂ ಕುರುಡರಂತಿದ್ದ ಸಿಸಿ ಕ್ಯಾಮರಾಗಳನ್ನು ಬದಲಿಸಿ ಹೈಟೆಕ್ ಕ್ಯಾಮರಾ ಅಳವಡಿಸಲಾಗಿದೆ. ಸ್ಪಷ್ಟ ದೃಶ್ಯ, ಧ್ವನಿ ಕೇಳಿಸುವಂತ ತಂತ್ರಜ್ಞಾನದೊಂದಿಗೆ ಸಾರ್ವಜನಿಕರು ಮತ್ತು ಅಧಿಕಾರಿಗಳ ಕಾರ್ಯವೈಖರಿ ಮೇಲೆ ನಿಗಾವಹಿಸಲಾಗಿದೆ. ಬಾಕಿಯಿರುವ ಹಳೇ ಕಡತಗಳ ಶೀಘ್ರ ವಿಲೇವಾರಿಗೆ ಕಂದಾಯ ಸಚಿವರ ಸೂಚನೆ ಮೇರೆಗೆ ಮೊದಲ ಆದ್ಯತೆ ನೀಡಲಾಗಿದೆ.
ಕಳೆದ 2017ರಿಂದ 2020 ಮತ್ತು, 20-22, 23-24ರಲ್ಲಿ ದಾಖಲಾಗಿರುವ ಪ್ರಕರಣಗಳು, ಇತ್ಯರ್ಥವಾಗದ್ದಕ್ಕೆ ಕಾರಣ ತಿಳಿಸಿ ಎಂದು ತಹಸೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಎಲ್ಲ ಕೇಸ್‌ಗಳ ಇತ್ಯರ್ಥಕ್ಕೆ ರಿವ್ಯೆವ್ ಮೀಟಿಂಗ್ ಮಾಡಬೇಕು. ಕೇವಲ ಸಮಯಕ್ಕೆ ಸರಿಯಾಗಿ ಬಂದು ಹೋಗುವುದಲ್ಲ. ಮುಖ್ಯವಾಗಿ 3/9 ಮಿಸ್ ಮ್ಯಾಚ್, ಸಾಗುವಳಿ ಚೀಟಿ ವಿತರಣೆ, ಪೌತಿ ಖಾತೆ ಆಂದೋಲನ ಕೈಗೊಂಡಿದ್ದರೂ ಸುಧಾರಿಸಿಲ್ಲ. ಗ್ರ್ಯಾಂಟ್ ಜಾಗಗಳ ವಿಲೇವಾರಿ ಸೇರಿ ಪ್ರಮುಖ ಕೆಲಸಗಳನ್ನು ಮಾಡಬೇಕು. ಕಂದಾಯ ಇಲಾಖೆಯ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಮುಂದಿನ 15 ದಿನಗಳಲ್ಲಿ ಸಭೆ ಆಯೋಜಿಸಲಾಗುವುದು. ದೊಡ್ಡಬಳ್ಳಾಪುರ ಎಸಿ ಕಚೇರಿಧೀರಜ್ ಮುನಿರಾಜು ಶಾಸಕ, ದೊಡ್ಡಬಳ್ಳಾಪುರ ಸಿಸಿ ಕ್ಯಾಮರಾಗಳು ಹಲವು ದಿನಗಳಿಂದ ಕೆಲಸ ಮಾಡುತ್ತಿರಲಿಲ್ಲ. ಈಗ ಹೊಸ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ತಡವಾಗಿ, ಗೈರಾಗುವ ಸಿಬ್ಬಂದಿ ಮೇಲೆ ನಿಗಾವಹಿಸಲು ಕ್ರಮಜರುಗಿಸಿದ್ದು, ಕಂದಾಯ ಸಚಿವರ ಮಾರ್ಗದರ್ಶನಂತೆ ಕಡತಗಳ ಇತ್ಯರ್ಥಗೊಳಿಸಲು ಎಲ್ಲ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ. ಮುಖ್ಯವಾಗಿ ಬಾಕಿಯಿರುವ ಫೈಲ್‌ಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಎನ್.ದುರ್ಗಶ್ರೀ ಎಸಿ, ದೊಡ್ಡಬಳ್ಳಾಪುರ ಗ್ರಾಮ ಲೆಕ್ಕಾಧಿಕಾರಿಗಳಿಂದ ಹಿಡಿದು ಮೇಲಧಿಕಾರಿಗಳವರೆಗೆ ಸಣ್ಣಪುಟ್ಟ ಕೆಲಸಕ್ಕೂ ಅಲೆದಾಟ ತಪ್ಪಿಲ್ಲ. ರೆಕಾರ್ಡ್ ರೂಂಗಳು ಯಾವಾಗಲೂ ಮುಚ್ಚಿರುತ್ತವೆ. ಚೀಟಿ ನೀಡಿ ಹೆಚ್ಚಿನ ಹಣ ನೀಡಿದವರ ದಾಖಲೆಗಳನ್ನು ಮಾತ್ರ ವಿಲೇ ಮಾಡಲಾಗುತ್ತಿದೆ. ಉಳಿದವರಿಗೆ ಕುಂಟು ನೆಪ ಹೇಳಿ ತಿಂಗಳಾನುಗಟ್ಟಲೇ ಅಲೆದಾಡಿಸುತ್ತಾರೆ. ಹೆಸರು ಹೇಳಲಿಚ್ಛಿಸದ ರೈತರು