

ರಾಯಚೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಏಕಕಾಲಕ್ಕೆ ಹಿಂದುಳಿದ ವರ್ಗಗಳ ಆಯೋಗದಿಂದ ಸಮೀಕ್ಷೆ ಆರಂಭವಾಗಿದ್ದು,
ತಾಲೂಕಿಗೆ ಸಂಬಂಧಿಸಿದಂತೆ ನಿಗದಿಪಡಿಸಲಾದ ಸ್ಥಳಗಳಿಗೆ ತೆರಳಿ ನಿರ್ಭಯವಾಗಿ ಗಣತಿ ಪ್ರಾರಂಭಿಸಬೇಕೆಂದು ತಹಸೀಲ್ದಾರ್ ಸುರೇಶ ವರ್ಮಾ ಹೇಳಿದರು.
ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸೋಮವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಜಾತಿ ಗಣತಿ ಸಮೀಕ್ಷೆಗೆ ಚಾಲನೆ ನೀಡಿ ಮಾತನಾಡಿ, ಗಣಿತಿಗೆ ನಿಯೋಜನೆ ಮಾಡಿದ ಶಿಕ್ಷಕರು ನಿರ್ಭಯವಾಗಿ ಗಣತಿ ಮಾಡಬೇಕು. ಸಮೀಕ್ಷೆ ಸಂದರ್ಭದಲ್ಲಿ ಯಾವುದೇ ತೊಂದರೆ ಎದುರಾದರೆ ಸಂಬಂಧಿಸಿದ ತಹಸೀಲ್ದಾರ್ ಕಚೇರಿಯಲ್ಲಿ ವಾರ್ ರೂಮ್ ಸ್ಥಾಪಿಸಲಾಗಿದ್ದು ತಕ್ಷಣ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ.
ಗಣತಿದಾರರು ಹಬ್ಬ, ಹರಿದಿನಗಳನ್ನು ಬಿಟ್ಟು ಕೆಲಸಕ್ಕೆ ಬರುತ್ತಿದ್ದಾರೆ. ಸಾರ್ವಜನಿಕರು ಗೌರವಯುತವಾಗಿ ಮಾಹಿತಿ ಒದಗಿಸಬೇಕು. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುತ್ತಾರೆ. ಸಮೀಕ್ಷೆ ಮುಗಿಸಿ ತಾಲೂಕಿಗೆ ಒಳ್ಳೆಯ ಹೆಸರು ತರಬೇಕು ಎಂದರು.
ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸುನಿತಾ ಮಾತನಾಡಿ, ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಸರಿಯಾಗಿ ನಡೆಯಬೇಕು. ಈ ಬಾರಿ ಡಿಜಿಟಲ್ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಸಮೀಕ್ಷೆಯು ಹಿಂದುಳಿದ ವರ್ಗಗಳ ಜನರಿಗೆ ಮಾತ್ರವಲ್ಲ ಕರ್ನಾಟಕದ ಪ್ರತಿಯೊಬ್ಬ ನಾಗರೀಕನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವ ಉದ್ದೇಶವನ್ನು ಹೊಂದಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಈರಣ್ಣ ಕೋಸಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರೇಡ್2 ತಹಸೀಲ್ದಾರ್ ಪರಶುರಾಮ, ಟೈನರ್ ಸದಾಶಿವಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕ ತಿಪ್ಪಾರೆಡ್ಡಿ ಮಾಲೀ ಪಾಟೀಲ್ ಸೇರಿದಂತೆ ಅನೇಕರು ಇದ್ದರು.