ತಾಲೂಕು ಆಡಳಿತ ಭವನದ ವಿದ್ಯುತ್ ಕಡಿತ

Published on

ಕೂಡ್ಲಿಗಿ: ವಿದ್ಯುತ್ ಬಿಲ್ ಬಾಕಿ ಪಾವತಿಸದ ಕಾರಣ ಜೆಸ್ಕಾಂ ತಾಲೂಕು ಆಡಳಿತ ಭವನದ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು.

ತಾಲೂಕು ಆಡಳಿತ ಒಟ್ಟು 5 ಲಕ್ಷ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಳ್ಳಲಾಗಿತ್ತು. ಬಾಕಿ ಪಾವತಿ ಮಾಡುವಂತೆ ಜೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದರು. ಆದರೆ ಬಿಲ್ ಪಾವತಿ ಮಾಡದ್ದರಿಂದ ಸೋಮವಾರ ಬೆಳಗ್ಗೆ 12 ಗಂಟೆಗೆ ಆಡಳಿತ ಭವನದ ಹಿಂಭಾಗದಲ್ಲಿರುವ ಟಿಸಿಯಿಂದ ವಿದ್ಯುತ್ ತಂತಿಗಳನ್ನು ಬೇರ್ಪಡಿಸಿ ವಿದ್ಯುತ್ ಕಡಿತಗೊಳಿಸಿದರು.

ಇದರಿಂದ ತಾಲೂಕು ಆಡಳಿತ, ಉಪ ನೋಂದಣಿ ಕಚೇರಿ, ಉಪ ಖಜಾನೆ ಕಚೇರಿ ಹಾಗೂ ಭೂ ಮಾಪನ ಇಲಾಖೆಗಳ ಕೆಲಸಗಳಿಗೆ ಸಮಸ್ಯೆಯಾಯಿತು. ಸಾರ್ವಜನಿಕ ಕೆಲಸಗಳಿಗೆ ಬಂದ ಜನರು ಸಹ ತೊಂದರೆ ಅನುಭವಿಸಿದರು. ಬಿಲ್ ಪಾವತಿ ಮಾಡಲು ತಾಲೂಕು ಆಡಳಿತ ಒಪ್ಪಿದ್ದರಿಂದ ಸಂಜೆ 3 ಗಂಟೆಗೆ ವಿದ್ಯುತ್ ಸಂಪರ್ಕ ನೀಡಲಾಯಿತು.

ಈ ಬಗ್ಗೆ ತಹಸೀಲ್ದಾರ್ ಎಂ. ರೇಣುಕಾ ಪ್ರತಿಕ್ರಿಯಿಸಿ, ತಾಲೂಕು ಆಡಳಿತ ಭವನದಲ್ಲಿ ಒಟ್ಟು 4 ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಇಡೀ ಕಟ್ಟಡಕ್ಕೆ ಒಂದೇ ಮೀಟರ್ ಇದೆ. ಇದರಿಂದ ತಾಲೂಕು ಆಡಳಿತ ಶೇ 60 ಹಾಗೂ ಉಳಿದ ಇಲಾಖೆಗಳು ಶೇ 40 ವಿದ್ಯುತ್ ಬಿಲ್ ನೀಡಬೇಕು ಎಂದು ಹೇಳಲಾಗಿದೆ. ಆದರೆ ಅನುದಾನ ಕೊರತೆಯ ನೆಪ ಹೇಳಿ ಹಣ ಪಾವತಿ ಮಾಡುತ್ತಿಲ್ಲ. ಇದರಿಂದ ಸಮಸ್ಯೆಯಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net