ತಾಲೂಕು ಆಡಳಿತ ಸೌಧದಿಂದ ಅನುಕೂಲ

4mnv01
ಮಾನ್ವಿಯಲ್ಲಿ ತಾಲೂಕು ಆಡಳಿತ ಸೌಧ ನಿರ್ಮಾನ ಕಾಮಗಾರಿಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಚಾಲನೆ ನೀಡಿದರು. ಸಚಿವ ಎನ್.ಎಸ್.ಬೋಸರಾಜು, ಶಾಸಕರಾದ ಹಂಪಯ್ಯ ನಾಯಕ, ಬಸನಗೌಡ ದದ್ದಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರಸಾಬ್ ಇತರರಿದ್ದರು.
Published on

ಮಾನ್ವಿ: ಸರ್ಕಾರಿ ಇಲಾಖೆಗಳ ಸೌಲಭ್ಯಗಳನ್ನು ಒಂದೇ ಸೂರಿನಡಿ ಸಾರ್ವಜನಿಕರಿಗೆ ಸುಲಭವಾಗಿ ತಲುಪಿಸಲು ತಾಲೂಕು ಆಡಳಿತ ಭವನ ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.

ಪಟ್ಟಣದಲ್ಲಿ ಶನಿವಾರ 10 ಕೋಟಿ ರೂ. ವೆಚ್ಚದ ತಾಲೂಕು ಆಡಳಿತ ಸೌಧ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಸಾರ್ವಜನಿಕರು ಕಂದಾಯ ಇಲಾಖೆ ಸೇರಿ ಇತರ ಇಲಾಖೆಗಳ ದಾಖಲೆಗಳನ್ನು ಪಡೆಯಲು ಕಚೇರಿಗಳಿಗೆ ಅಲೆಯಬೇಕಿತ್ತು. ಈಗ ತಾಲೂಕು ಆಡಳಿತ ಸೌಧ ನಿರ್ಮಾಣದಿಂದ ಎಲ್ಲ ಕಚೇರಿಗಳು ಒಂದೇ ಕಡೆ ಕಾರ್ಯನಿರ್ವಹಿಸಲಿದ್ದು, ಜನರಿಗೆ ಅಲೆದಾಡುವುದು ತಪ್ಪಲಿದೆ ಎಂದರು.

ಸಣ್ಣ ನಿರಾವರಿ ಸಚಿವ ಎನ್.ಎಸ್.ಬೋಸರಾಜು ಮಾತನಾಡಿ, ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ಗುಣಮಟ್ಟದಿಂದ ಕಟ್ಟಡ ನಿರ್ಮಾಣ ಮಾಡಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನಪರ ಯೋಜನೆಗಳ ಮೂಲಕ ಜನರಿಗೆ ಹತ್ತಿರವಾಗುತ್ತಿದೆ. ಮಾನ್ವಿ ವಿಧಾನಸಭಾ ಕ್ಷೇತ್ರದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸೇರಿ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.

ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗಫೂರಸಾಬ್, ಪ್ರಮುಖರಾದ ಕೆ.ಶಾಂತಪ್ಪ, ಬಾಲಸ್ವಾಮಿ ಕೊಡ್ಲಿ ಸುಭಾಷ್ ನಾಯಕ, ಹನುಮೇಶ್ ಮದ್ಲಾಪುರ, ತಿಪ್ಪಣ್ಣ ಬಾಗಲವಾಡ, ಶ್ರೀಶೈಲಪ್ಪಗೌಡ, ರೌಡೂರು ಮಹಾಂತೇಶ ಸ್ವಾಮಿ, ಸೈಯದ್ ಖಾಲೀದ್ ಗುರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net