

ಹೊಸಪೇಟೆಯಲ್ಲಿ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜು ಹೇಳಿಕೆ
ಹೊಸಪೇಟೆ : ನಮ್ಮ ಹಿರಿಯಜ್ಜ ಶಾಮನೂರು ಶಿವಶಂಕರಪ್ಪರ ವಿರುದ್ಧ ಮಾತನಾಡಿದರೆ, ನಮ್ಮ ತಂದೆ ವಿರುದ್ಧ ಮಾತನಾಡಿದಂತಾಗುತ್ತದೆ ಎಂದು ಹರಪನಹಳ್ಳಿಯ ಪಕ್ಷೇತರ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ನಯವಾಗಿಯೇ ನುಣುಚಿಕೊಂಡರು.
ನಗರದಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಆಯ್ಕೆ ಬಯಸಿ ಶುಕ್ರವಾರ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ದೊಡ್ಡವರ ವಿಚಾರಕ್ಕೆ ಪ್ರತಿಕ್ರಿಯಿಸುವುದಿಲ್ಲ. ಶಾಮನೂರು ಶಿವಶಂಕ್ರಪ್ಪ ಅವರು ನಮ್ಮ ಮನೆಯ ಹಿರಿಯಜ್ಜ. ನಾನು ಕೂಡಾ ಲಿಂಗಾಯತ ಶಾಸಕಿಯಾಗಿದ್ದರೂ, ಶಾಮನೂರ ಅಭಿಪ್ರಾಯದ ಬಗ್ಗೆ ಮಾತನಾಡುವಷ್ಟು ದೊಡ್ಡವಳಲ್ಲ. ಸರ್ಕಾರದಲ್ಲಿ ಗೊಂದಲಗಳಿದ್ದರೂ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬಗೆಹರಿಸಿಕೊಳ್ಳುತ್ತೇವೆ. ಶ್ಯಾಮನೂರು ಶಿವಶಂಕರಪ್ಪ ಅವರ ಹೇಳಿಕೆಗೆ ಮುಖ್ಯಮುಂತ್ರಿ, ಉಪ ಮುಖ್ಯಮಂತ್ರಿ ಪ್ರತಿಕ್ರಿಯಿಸುತ್ತಾರೆ. ನಾನೊಬ್ಬ ಸಾಮಾನ್ಯ ಪಕ್ಷೇತರ ಶಾಸಕಿ ಎಂದು ಹೇಳಿದರು.
ನಾನು ಕಾಂಗ್ರೆಸ್ ಶಾಸಕಿಯಲ್ಲ. ಆದರೆ, ಶಾಸಕಾಂಗ ಪಕ್ಷದ ಸಹ ಸದಸ್ಯಳಾಗಿ ಸರ್ಕಾರಕ್ಕೆ ಬೆಂಬಲ ನೀಡಿದ್ದೇನೆ. ನಾನು ಪಕ್ಷೇತರ ಶಾಸಕಿ ಎಂಬುದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಮುಂಬರುವ ಲೋಕಸಭೆ ಚುನಾವಣೆಗೆ ಕೆಪಿಸಿಸಿ ಅಧ್ಯಕ್ಷರು ವಹಿಸುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ ಎಂದರು.
ನಮ್ಮದೂ ರೈತ ಕುಟುಂಬ. ಸಾವಿರಾರು ಎಕರೆ ಜಮೀನು ಹೊಂದಿದ್ದು, ನಮ್ಮ ತಂದೆ ಎಂ.ಪಿ.ಪ್ರಕಾಶ, ನಮ್ಮ ಸಹೋದರ ಎಂ.ಪಿ.ರವೀಂದ್ರ ಅವರು ಕೂಡಾ ಸಹಕಾರಿ ರಂಗದಲ್ಲಿ ಕೃಷಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಭಾಗದ ರೈತರ ಒತ್ತಾಯದ ಮೇರೆಗೆ ಬಿಡಿಸಿಸಿ ಬ್ಯಾಂಕ್ ಚುನಾವಣಾ ಅಖಾಡಕ್ಕೆ ಇಳಿದಿದ್ದೇನೆ. ನಿರ್ದೇಶಕಳಾಗಿ ಆಯ್ಕೆಯಾದ ಬಳಿಕ ಎಲ್ಲ ನನ್ನನ್ನು ಹೊರತು ಪಡಿಸಿ ಎಲ್ಲ ೧೩ ಜನ ನಿರ್ದೇಶಕರು ಬಯಸಿದರೆ, ಅಧ್ಯಕ್ಷೆಯಾಗಿ ಜಿಲ್ಲೆಯ ರೈತರ ಪರವಾಗಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಕೆಪಿಸಿಸಿ ವಕ್ತಾರ ಪತ್ರೇಶ ಹಿರೇಮಠ, ಮಲ್ಲಿಕಾರ್ಜುನ, ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕರಾದ ಕೆ.ಎಂ.ಗಂಗಾಧರ, ಬಿ.ಕೆ.ಪ್ರಕಾಶ, ಪುರಸಭೆ ಸದಸ್ಯ ಗೊಂಗಡಿ ರಾಜಣ್ಣ, ಪುರಸಭೆ ಮಾಜಿ ಅಧ್ಯಕ್ಷ ಎಂ.ವಿ.ಅಜನಪ್ಪ ಮತ್ತಿತರರು ಇದ್ದರು.