ರಂಗಾಯಣ ನಿರ್ದೇಶಕರಾಗಿ ತಾಳಿಕೋಟಿ ನೇಮಕ

12 vikram 10
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಂಗಾಯಣ ನಿರ್ದೇಶಕರಾಗಿ ಹಾಸ್ಯ ನಟ, ವೃತ್ತಿ ರಂಗಭೂಮಿ ಕಲಾವಿದ ರಾಜು ತಾಳಿಕೋಟಿ ಅವರನ್ನು ನೇಮಕ ಮಾಡಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನವರಾದ ರಾಜು ತಾಳಿಕೋಟಿ ಅವರು ಕುಡುಕರ ಜೀವನ ಆಟಾಟೋಪಗಳನ್ನು ಹಾಸ್ಯವಾಗಿ ಚಿತ್ರಿಸಿದ ಕಲಿಯುಗದ ಕುಡುಕ ನಾಟಕದ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ತಂದೆ-ತಾಯಿ ಸ್ಥಾಪಿಸಿದ ಖಾಸ್ಗತೇಶ್ವರ ನಾಟಕ ಸಂಘದ ಸಂಚಾಲಕರಾಗಿ ರಾಜ್ಯಾದ್ಯಂತ ಹಲವು ನಾಟಕಗಳನ್ನು ಪ್ರದರ್ಶಿಸಿದ್ದಾರೆ. ನಾಟಕಗಳ ಮೂಲಕವೇ ಸಿನೆಮಾ ರಂಗ ಪ್ರವೇಶಿಸಿರುವ ರಾಜು ತಾಳಿಕೋಟಿ ಹಲವು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಸುಮಾರು 1 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ರಂಗಾಯಣ ನಿರ್ದೇಶಕರ ಆಯ್ಕೆಗೆ ಸರ್ಕಾರ ಕೊನೆಗೂ ಇತಿಶ್ರೀ ಹಾಡಿದೆ. ಆದರೆ ಅಚ್ಚರಿಯ ಆಯ್ಕೆಯಿಂದ ಸ್ಥಳಿಯ ಕಲಾವಿದರಲ್ಲಿ ಕೊಂಚ ಬೇಸರವೂ ಆಗಿದೆ. ಸಮಾನ್ಯವಾಗಿ ರಂಗ ಸಮಾಜದ ಸದಸ್ಯರು ನೀಡಿರುವ ಮೂವರು ಹೆಸರಿನಲ್ಲಿ ಒಬ್ಬರನ್ನು ಅಂತಿಮಗೊಳಿಸಲಾಗುತ್ತದೆ. ಆದರೆ ರಂಗ ಸಮಾಜ ನೀಡಿದ ಹೆಸರುಗಳನ್ನು ಬಿಟ್ಟು ಇನ್ನೊಬ್ಬರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಸರ್ಕಾರದ ನಡೆಗೆ ಸ್ಥಳಿಯ ಕಲಾವಿದರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net