ಹಿಂದು ಮಹಾ ಗಣಪತಿ ಮಂಡಳಿ ಉಜ್ವಲವಾಗಿ ಬೆಳೆಯಲಿ

Talikote, Srishaila Jagadguru, Vinayaka Mahapuje, Hindu Maha Ganapati Board,
ತಾಳಿಕೋಟೆ ಪಟ್ಟಣದ ಹಿಂದು ಮಹಾ ಗಣಪತಿ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ ಸ್ಥಳಕ್ಕೆ ಭೇಟಿ ನೀಡಿದ್ದ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರನ್ನು ಸನ್ಮಾನಿಸಲಾಯಿತು. ಗುರುಲಿಂಗ ಶಿವಾಚಾರ್ಯರು, ಸೋಮಲಿಂಗ ಸ್ವಾಮಿಗಳು, ಸಂತೋಷಭಟ್ ಜೋಶಿ ಇತರರಿದ್ದರು.
Published on

ತಾಳಿಕೋಟೆ: ಮಾತೃಭಕ್ತಿ, ಬುದ್ಧಿ ಶಕ್ತಿ ಮತ್ತು ವಿಘ್ನ ವಿನಾಶದ ಸಂಕೇತ ಶಕ್ತಿಯಾಗಿ ಗಣಪತಿಯನ್ನು ಪೂಜಿಸಲಾಗುತ್ತದೆ. ವಿನಾಯಕ ದೇವರಲ್ಲಿರುವ ಗುಣಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದು ಶ್ರೀಶೈಲದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದ ಸ್ವಾಮಿಗಳು ಹೇಳಿದರು.

ತಾಳಿಕೋಟೆ ಪಟ್ಟಣದ ತಿಲಕ ರಸ್ತೆಯಲ್ಲಿ ಹಿಂದು ಮಹಾ ಗಣಪತಿ ಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾದ ಬೃಹತ್ ಗಣೇಶ ಮೂರ್ತಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ಅವರು ಆಶೀರ್ವಚನ ನೀಡಿದರು.

ಜನ್ಮಕೊಟ್ಟ ತಾಯಿ, ಭಾರತ ಮಾತೆಯನ್ನು ಪೂಜ್ಯ ಭಾವನೆಯಿಂದ ಕಾಣಬೇಕು. ಮತ್ತೊಬ್ಬರ ಕಷ್ಟಗಳನ್ನು ದೂರ ಮಾಡಲು ಸಹಕರಿಸಿದರೆ ನಮ್ಮ ಕಷ್ಟಗಳು ಕೂಡ ತಾವಾಗಿಯೇ ದೂರವಾಗುತ್ತವೆ. 10 ವರ್ಷಗಳಿಂದ ಗಣಪತಿ ಪೂಜಿಸುತ್ತಿರುವ ದಶಮಾನೋತ್ಸವದ ಸಂಭ್ರಮದಲ್ಲಿರುವ ತಾಳಿಕೋಟೆಯ ಹಿಂದು ಮಹಾ ಗಣಪತಿ ಮಂಡಳಿಯವರು ಹಿಂದುತ್ವದ ಸಮ್ಮೇಳನ ಹಾಗೂ ಸಂಘಟನೆಗೆ ಮುಂದಾಗಿರುವುದು ನಿಜಕ್ಕೂ ಸ್ವಾಗತಾರ್ಹ. ಮುಂದಿನ ದಿನಮಾನಗಳಲ್ಲಿ ಹಿಂದು ಮಹಾ ಗಣಪತಿ ಮಂಡಳಿ ಇನ್ನೂ ಉಜ್ವಲವಾಗಿ ಬೆಳೆಯಲಿ. ಬರುವ ದಿನಮಾನಗಳಲ್ಲಿ ಸಂಪೂರ್ಣ ದಿನವನ್ನು ತಾಳಿಕೋಟೆ ಹಿಂದು ಮಹಾಗಣಪತಿ ಮಂಡಳಿಯ ಪೂಜಾ ಕಾರ್ಯಕ್ರಮದಲ್ಲಿ ಮೀಸಲಿಡುತ್ತೇನೆ ಎಂದರು.

ಗುಂಡಕನಾಳ ಬೃಹನ್ಮಠದ ಗುರುಲಿಂಗ ಶಿವಾಚಾರ್ಯರು ಮಾತನಾಡಿ, ಗಣಪತಿಗೆ ದೈನಂದಿನ ಪೂಜೆಯ ಜತೆಗೆ ವೇ.ಸಂತೋಷಭಟ್ ಜೋಶಿ ಅವರ ನೇತೃತ್ವದಲ್ಲಿ ಗಣ ಹೋಮ ಕಾರ್ಯಕ್ರಮವನ್ನು ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಸಲಾಗಿದೆ. ಹೋಮ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತಿದ್ದಂತೆ ಅಂದಾಜು 1 ಗಂಟೆ ವರುಣದೇವನ ಕೃಪಾಶೀರ್ವಾದ ಆಗಿರುವುದು ಒಳ್ಳೆಯ ಕ್ಷಣವಾಗಿದೆ. ಭಕ್ತರ ಆಶಾಭಾವನೆಯಂತೆ ಶ್ರೀಶೈ ಜಗದ್ಗುರುಗಳು ಹಿಂದು ಮಹಾ ಗಣಪತಿ ಮಂಡಳಿಗೆ ಆಶೀರ್ವದಿಸಿರುವುದು ಸಂತಸ ತಂದಿದೆ ಎಂದರು.

ಕಾರ್ಯಕ್ರಮಕ್ಕೂ ಮೊದಲು ಶ್ರೀಶೈಲ ಜಗದ್ಗುರುಗಳನ್ನು ಮಹಿಳೆಯರು ಕುಂಭ ಕಳಸದೊಂದಿಗೆ ಅದ್ದೂರಿಯಾಗಿ ಸ್ವಾಗತ ಕೋರಿದರು. ಜಗದ್ಗುರುಗಳಿಗೆ ಮಹಾ ಗಣಪತಿಯ ಭಾವಚಿತ್ರ ನೀಡಿ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

ಕೆಸರಟ್ಟಿಯ ಶಂಕರಲಿಂಗ ಮಠದ ಸೋಮಲಿಂಗ ಸ್ವಾಮಿಗಳು ಹಾಗೂ ವೇ.ಸಂತೋಷಭಟ್ ಜೋಶಿ ಅವರು ಗಣೇಶನಿಗೆ ಪುಷ್ಪನಮನ ಸಲ್ಲಿಸಿದರು. ಹಿಂದು ಮಹಾ ಗಣಪತಿ ಮಂಡಳಿಯ ಕಾರ್ಯಕರ್ತರು, ಭಕ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net